ಧಾರವಾಡ: ಕಳೆದ ಎರಡು ವರ್ಷಗಳಿಂದ ನಾನು ನನ್ನ 20 ಎಕರೆ ಭೂಮಿಗೆ ರಸಗೊಬ್ಬರ, ಕ್ರಿಮಿನಾಶಕ, ಹೊರಗಿನ ಬೀಜ ಯಾವುದನ್ನೂ ಬಳಸುವುದಿಲ್ಲ. ಬದಲಾಗಿ ಮನೆಯಲ್ಲೇ ಸಂಸ್ಕರಿಸಿದ ಬೀಜ, ಕೊಟ್ಟಿಗೆ ಗೊಬ್ಬರ, ಜೀವಜಂತುಗಳನ್ನು ನಂಬಿ ಕೃಷಿ ಮಾಡುತ್ತಿದ್ದೇನೆ. ಎಲ್ಲರಿಗಿಂತ ಹೆಚ್ಚು ಇಳುವರಿ ಪಡೆಯುತ್ತಿದ್ದೇನೆ....
ಕುಂದಗೋಳ ತಾಲೂಕು ಹಿರೇಗುಂಜಳ ಗ್ರಾಮದ ಸಾವಯವ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ ಹೀಗೆ ತನ್ನ ಕೃಷಿ ಬದುಕಿನ ಬಗ್ಗೆ ಸಹಜ ಮತ್ತು ನಿರರ್ಗಳವಾಗಿ ಮಾತನಾಡುತ್ತಿದ್ದರೆ, ವೇದಿಕೆಯಲ್ಲಿ ಸೂಟುಧಾರಿಗಳಾಗಿ ಕುಳಿತಿದ್ದ ಕೃಷಿ ವಿಜ್ಞಾನಿಗಳಾದ ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ್, ಶಿವಮೊಗ್ಗದ ಡಾ.ಆರ್.ಸಿ.ಜಗದೀಶ, ಮಂಡ್ಯದ ಡಾ.ಹರಿಕುಮಾರ, ಬಿ.ಡಿ.ಬಕಾಯಿ ಸೇರಿದಂತೆ ಹಲವರು ತದೇಕಚಿತ್ತದಿಂದ ಆತನ ಮಾಗೆ ತಲೆದೂಗುತ್ತಿದ್ದರು.ಸಗಣಿಯಲ್ಲಿ ಹಲವು ಪ್ರಯೋಗ ಮಾಡಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಎರೆಹುಳು ಗೊಬ್ಬರ ತಯಾರಿಸುತ್ತೇನೆ. ಬರೀ ಎರೆಹುಳು ಅಷ್ಟೇ ಅಲ್ಲ ಅನೇಕ ಜೀವಜಂತು, ಪತಂಗಗಳು ಕೃಷಿಸ್ನೇಹಿ ಆಗಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಮಣ್ಣಿಗೆ ಮತ್ತೇ ಜೀವ ಬರುತ್ತದೆ. ಮಣ್ಣು ಬರೀ ಫಲವತ್ತಾಗುವುದಿಲ್ಲ, ಅಪಾರ ಪ್ರಮಾಣದ ನೀರು ಹಿಡಿದುಕೊಂಡು ಬರ ನಿರೋಧಕ ಆಗುತ್ತದೆ. ಹಾಗಾಗಿ ನಾನು ಯಾವುದೇ ನೀರಾವರಿ ಅನುಕೂಲತೆ ಇಲ್ಲದೇ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದೇನೆ ಎಂದಾಗ ಸಭಿಕರಿಂದ ಕರತಾಡಣ ಕೇಳಿ ಬಂತು.
ಜೀವಜಂತು ಸರಪಳಿ: ಬೆಳೆದದ್ದೆಲ್ಲ ನನಗೇ ಬೇಕು ಎಂದರೆ ಹಕ್ಕಿ-ಪಕ್ಷಿಗಳು, ಅಳಿಲು ಇತ್ಯಾದಿಗಳು ಎಲ್ಲಿಗೆ ಹೋಗಬೇಕು? ರೈತ ಪರಿಸರ ಸ್ನೇಹಿ ಆಗಬೇಕು. ಜನರಿಗೆ ಅಷ್ಟೇ ಅಲ್ಲ ಪ್ರಾಣಿ-ಪಕ್ಷಿಗಳಿಗೂ ಅನ್ನ ಹಾಕುವವ ನಿಜವಾದ ರೈತ. ನಾಲ್ಕು ಎಕರೆ ಕಡಲೆ ಹಾಕಿದ್ದೆ. ಆ ಬೀಜದಲ್ಲಿ ತುಸು ಜೋಳ ಕೂಡಿಸಿದ್ದೆ. ಜೋಳದ ಕಾಳು ತಿನ್ನಲು ಬಂದ ಗುಬ್ಬಿಗಳು ಕಡಲೆ ಗಿಡದ ಹುಳು, ಕೀಡೆಗಳನ್ನು ತಿಂದು ನನಗೆ ಹೆಚ್ಚು ಫಸಲು ನೀಡಿದವು. ನಾವು ಅವುಗಳಿಗೆ ಏನಾದರೂ ಕೊಟ್ಟರೇ ಅವು ನಮ್ಮ ಬೆಳೆಗಳನ್ನು ರಕ್ಷಿಸುತ್ತವೆ ಎಂದು ಮಲ್ಲೆಶಪ್ಪ ಜೀವಜಂತು ಸರಪಳಿಯ ಪಾಠ ಮಾಡಿದರು.ಹಳೆಯ ಕೃಷಿ ಪದ್ಧತಿಗೆ ಮರಳುವುದೊಂದೇ ಅಪಾಯದಲ್ಲಿರುವ ಈ ದೇಶವನ್ನು ಕಾಪಾಡಲು ಇರುವ ಏಕೈಕ ಅಸ್ತ್ರ. ಎತ್ತು, ಎಮ್ಮೆ, ಆಕಳು, ಆಡು ಸಾಕುತ್ತ. ಅವುಗಳ ಸಗಣಿ, ಗಂಜಲು ಹೊಲಕ್ಕೆ ಹಾಕಬೇಕು, ಹೊಲದ ಮೇವು ಅವುಗಳಿಗೆ ಆಹಾರವಾಗಬೇಕು. ಅಂದಾಗ ಮಾತ್ರ ಸುಸ್ಥಿರ ಮಣ್ಣು, ಪರಿಸರ ಸ್ನೇಹಿ ಕೃಷಿ ಮಾಡಲು ಸಾಧ್ಯ. ಮಣ್ಣಿನ ಆರೋಗ್ಯದ ಮೇಲೆ ಮನುಷ್ಯರ ಆರೋಗ್ಯ ನಿಂತಿದೆ ಎನ್ನುವ ವಾಸ್ತವಿಕ ಸತ್ಯವನ್ನು ಮಲ್ಲೇಶಪ್ಪ ಅತ್ಯಂತ ಸರಳ ಭಾಷೆಯಲ್ಲಿ ಮನವರಿಕೆ ಮಾಡಿ ನೆರೆದಿದ್ದ ಕೃಷಿ ವಿಜ್ಞಾನಿಗಳು, ರೈತರ ಕಣ್ಣು ತೆರೆಸಿದರು.
ಮನಗುಂಡಿಯ ಬಸವಾನಂದ ಶ್ರೀ ಸಾನಿಧ್ಯ ವಹಿಸಿ ಮಾತನಾಡಿದರು.