ಸಿದ್ದಾಪುರ: ಇಂದಿನ ಕೃಷಿ ಕಾಯ್ದೆ ಎನ್ನುವುದು ಕಾರ್ಪೊರೇಟ್ ಸಂಸ್ಥೆಗಳಿಗೆ ಪೂರಕವಾಗಿದೆ. ರೈತರಿಗೆ ಸರ್ಕಾರಗಳು ವಿಶೇಷ ಆದ್ಯತೆ ನೀಡಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆ ರೈತರಿಗೆ ದೊಡ್ಡ ಅಪಾಯ ಸೃಷ್ಟಿ ಮಾಡುತ್ತಿದೆ. ಕೃಷಿ ಭೂಮಿಯ ಆರೋಗ್ಯ ಹಾಗೂ ಸಂರಕ್ಷಣೆ ರೈತನಿಗೆ ಇರಬೇಕು. ಕೃಷಿ ಭೂಮಿಯನ್ನು ರೈತನ ಹೊರತುಪಡಿಸಿ ಬೇರೆಯವರು ಖರೀದಿಮಾಡಬಾರದೆಂದಿತ್ತು. ಬಿ.ಎಸ್. ಯಡಿಯೂರಪ್ಪ ಸರ್ಕಾರದ ಕಾಯ್ದೆಯ ಪ್ರಕಾರ ಯಾರು ಬೇಕಾದರೂ ಕೃಷಿ ಭೂಮಿಯನ್ನು ಖರೀದಿ ಮಾಡಬಹುದು. ಇದರಿಂದ ಭೂಮಿಯ ಬೆಲೆ ಗಗನಕ್ಕೇರಿದೆ. ತೆರಿಗೆ ಕದಿಯಲು ಕೆಲವರು ಕೃಷಿ ಭೂಮಿಯನ್ನು ಖರೀದಿಸುತ್ತಿದ್ದಾರೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗುವಂತಾಗಿದೆ ರೈತರು, ಕೃಷಿಕರು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಸಂಕಷ್ಟನುಭವಿಸಬೇಕಾಗುತ್ತದೆ. ಕೃಷಿ ಕಾಯ್ದೆ ವಾಪಸ್ ಪಡೆಯುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಕೆಲಸ ಮಾಡಲಿಲ್ಲ. ಬದಲಿಗೆ ಬಜೆಟ್‌ಗೆ ೩೫ ಸಾವಿರ ಕೋಟಿ ಸಂಗ್ರಹಿಸಲು ಮುದ್ರಾಂಕ ಶುಲ್ಕ ಹೆಚ್ಚಿಸಿ ತ್ವರಿತಗತಿಯಲ್ಲಿ ಭೂಮಿ ರಿಜಿಸ್ಟ್ರೇಷನ್ ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದು ಆಕ್ಷೇಪವ್ಯಕ್ತಪಡಿಸಿದರು.ಅಡಕೆ ಕೊಳೆ ಹಾಗೂ ಎಲೆಚುಕ್ಕಿ ರೋಗದಿಂದ ಬೆಳೆಗಾರರು ನಷ್ಟದಲ್ಲಿದ್ದಾರೆ. ಅಧಿಕಾರಿಗಳು, ವಿಜ್ಞಾನಿಗಳು ಸರಿಯಾದ ಪರಿಶೀಲನೆ ನಡೆಸಿ ಸೂಕ್ತವಾದ ಔಷಧ ಕಂಡುಹಿಡಿಯಬೇಕು. ಅಡಕೆಗೆ ಬೆಳೆವಿಮೆ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದ್ದು ಈ ಕುರಿತು ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡುವುದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.ಶರಾವತಿ ಹಿನ್ನೀರಿನ ಪ್ರದೇಶದ ಜನರಿಗೆ ಪರಿಸರದ ಅಪಾಯದ ರಕ್ಷಣೆಗಾಗಿ ಅಧ್ಯಯನ ನಡೆಸುತ್ತಿದ್ದೇವೆ. ಅಧ್ಯಯನದ ವರದಿಯನ್ನು ಆಧರಿಸಿ ನಮ್ಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಫಸಲ್ ಬಿಮಾ ಎಂಬ ಯೋಜನೆ ಅದಾನಿ ಕಂಪನಿಗೆ ಸೇರಿದ್ದಾಗಿದೆ. ಮೋದಿಯವರು ರೈತರಿಗೆ ಅನುಕೂಲ ಮಾಡಿಕೊಡುವ ಬದಲು ಕಂಪನಿಗಳಿಗೆ ವರದಾನ ನೀಡುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧವಾಗಿ ಜಾರಿಗೊಳಿಸಬೇಕು. ಇದರಿಂದ ರೈತರು ನಷ್ಟದ ಸುಳಿಯಿಂದ ಕೊಂಚ ಹೊರಬರುತ್ತಾರೆ. ರಾಜಕಾರಣಿಗಳು ದ್ವಂದ್ವ ನೀತಿಯನ್ನು ಬಿಡಬೇಕು. ರೈತರು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕು ಎಂದರು.ಗೌರವಾಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ, ರಾಜ್ಯ ಸಮಿತಿ ಸದಸ್ಯ ಇಂದೂಧರ ಪಾಟೀಲ್ ಇದ್ದರು.