ರಾಂ ಅಜೆಕಾರು ಕಾರ್ಕಳ
ಆಗುಂಬೆ ಘಾಟಿ ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಸಂಚಾರದ ಪ್ರಮುಖ ಕೊಂಡಿಯಾಗಿದೆ. ಘಾಟಿಯಲ್ಲಿ ಒಟ್ಟು 14 ಕಡಿದಾದ ತಿರುವುಗಳಿದ್ದು, ಇವುಗಳಲ್ಲಿ ಮೇಲ್ಭಾಗದ 7 ತಿರುವುಗಳು ಶಿವಮೊಗ್ಗ ಜಿಲ್ಲೆಗೂ ಹಾಗೂ ಕೆಳಗಿನ 7 ತಿರುವುಗಳು ಉಡುಪಿ ಜಿಲ್ಲೆಗೂ ಸೇರಿವೆ. ಪ್ರಸ್ತುತ 5,7 , 3, 4 ತಿರುವು ಹಾಗೂ ಆನೇಕಲ್ಲು ರಸ್ತೆ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಲವರ್ಷಗಳ ಹಿಂದೆ ಸೂರ್ಯಾಸ್ತಮಾನ ಪ್ರದೇಶದ ತಿರುವಿನಲ್ಲಿ ಗುಡ್ಡ ಕುಸಿತ ಸಂಭವಿಸಿ ಸುಮಾರು 3 ತಿಂಗಳು ಸಂಚಾರ ಕಡಿತವಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಕುಸಿತವಾಗಿದ್ದು, ಜೋರು ಮಳೆಯಾದಲ್ಲಿ ಕುಸಿತ ಮುಂದುವರಿಯುವ ಭೀತಿಯಿದೆ.
ಟ್ರಾಫಿಕ್ ಜಾಂ: ಸೂರ್ಯಾಸ್ತದ ಸಮಯವಾಗುತ್ತಿದ್ದಂತೆ ಆಗುಂಬೆಯತ್ತ ಪ್ರವಾಸಿಗರ ವಾಹನಗಳ ಹರಿವು ಹೆಚ್ಚಾಗುತ್ತದೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಸೂರ್ಯಾಸ್ತ ವೀಕ್ಷಿಸುವವರು, ಫೋಟೊ ತೆಗೆಯುವವರು, ಎದುರು-ಬದುರಾಗಿ ಸಾಗುವ ವಾಹನಗಳು ಇವೆಲ್ಲವೂ ಸೇರಿ ಘಾಟಿಯ ಕಿರಿದಾದ ರಸ್ತೆಯಲ್ಲಿ ಸಂಚಾರದ ಒತ್ತಡ ಸೃಷ್ಟಿಸುತ್ತಿವೆ. ವಾರಾಂತ್ಯ ದಿನಗಳಲ್ಲಿ ಈ ಒತ್ತಡ ಇನ್ನಷ್ಟು ಹೆಚ್ಚಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದು ಸ್ಥಳೀಯರಿಗೆ ನಿತ್ಯದ ಸಮಸ್ಯೆಯಾಗಿದೆ. ವಾಹನ ಸವಾರರು ಅಪಾಯದ ಸ್ಥಳದಲ್ಲಿ ನಿಧಾನವಾಗಿ ಹಾಗೂ ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವ ಅಗತ್ಯವಿದೆ.ಪ್ರವಾಸಿಗರೇ ಎಚ್ಚರ!: ಸೂರ್ಯಾಸ್ತದ ಸಮಯದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಸಂಚಾರಕ್ಕೆ ಅಡ್ಡಿಯಾಗದಂತೆ ಸಹಕರಿಸಬೇಕಿದೆ. ಕುಸಿದಿರುವ ರಸ್ತೆ ಅಂಚಿನ ಬಳಿ ನಿಂತು ಫೋಟೊ ತೆಗೆಯುವುದು ಅಥವಾ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸುವುದು ಸುರಕ್ಷಿತ.
₹18 ಕೋಟಿ ಅನುದಾನ: ಆಗುಂಬೆ ಘಾಟಿ ರಸ್ತೆಯ ದುರಸ್ತಿಗಾಗಿ ಸುಮಾರು ₹ 18 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಘಾಟಿ ರಸ್ತೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬಿಡುಗಡೆಯಾಗಿರುವ ಈ ಅನುದಾನದಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕಿದೆ. ರಸ್ತೆ ಕುಸಿತ, ಹೆಚ್ಚುತ್ತಿರುವ ಪ್ರವಾಸಿಗರ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು.ಸಚಿವರ ಭೇಟಿ: ಜುಲೈ ತಿಂಗಳಿನಲ್ಲಿ ಆಗುಂಬೆ ಘಾಟಿ ಪ್ರದೇಶಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಜಾರಕಿಹೊಳಿ ರಸ್ತೆಯ ಅಪಾಯಕಾರಿ ತಿರುವುಗಳ ದುರಸ್ತಿಗೆ ವಿಶೇಷ ಗಮನ ನೀಡಲಾಗುವುದು ಎಂದು ತಿಳಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಸಾಗುವ ಅಗುಂಬೆ ಘಾಟಿ ರಸ್ತೆ ದುರಸ್ತಿಗೆ ರಸ್ತೆ ಅಭಿವೃದ್ದಿಗೆ 18 ಕೋಟಿ ಬಿಡುಗಡೆ ಮಾಡಲಾಗಿದೆ ಸದ್ಯದಲ್ಲೇ ಕಾಮಗಾರಿ ಅರಂಭವಾಗಲಿದೆ.-ಕೋಟ ಶ್ರೀನಿವಾಸ ಪೂಜಾರಿ, ಸಂಸದ.
ಘಾಟಿ ರಸ್ತೆಯು ಹಲವು ಕಡೆ ಹದಗೆಟ್ಟು, ಗುಂಡಿ ಹಾಗೂ ಕುಸಿತದಿಂದ ವಾಹನ ಚಲಾಯಿಸುವುದೇ ಕಷ್ಟವಾಗಿದೆ. ಇದರ ಜೊತೆಗೆ ವೀಕೆಂಡ್ ಟ್ರಾಫಿಕ್ ಜಾಮ್‌ನಿಂದ ಆಂಬುಲೆನ್ಸ್ ಸಂಚಾರ ಇನ್ನಷ್ಟು ಕಷ್ಟವಾಗುತ್ತದೆ. ತುರ್ತು ರೋಗಿಗಳಿಗೆ ಸಮಯ ಅತ್ಯಂತ ಮುಖ್ಯ.-ಪ್ರಶಾಂತ್ ಆಂಬುಲೆನ್ಸ್ ಚಾಲಕ ಮಣಿಪಾಲ