ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಲೋಕಮಾತೆ ಅಹಲ್ಯಾ ಬಾಯಿ ಹೊಳ್ಕರ್ 300ನೇ ಜಯಂತಿ
ಭಾರತೀಯರ ಮನದಾಳದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿರುವ ಅಹಲ್ಯಾ ಬಾಯಿ ಹೊಳ್ಕರ್ ಉತ್ತಮ ಆಡಳಿತ, ಜನಾನುರಾಗಿ ಕಾರ್ಯ ಮತ್ತು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಳಿಂದಾಗಿ ಮಾದರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಶನಿವಾರ ಏರ್ಪಡಿಸಿದ್ದ ಲೋಕಮಾತೆ ಅಹಲ್ಯಾ ಬಾಯಿ ಹೊಳ್ಕರ್ 300ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾರಾಷ್ಟ್ರದಲ್ಲಿ ಜನಿಸಿ ಮಧ್ಯಪ್ರದೇಶದ ಸೊಸೆಯಾಗಿ ತೆರಳಿದ ಅಹಲ್ಯಾ ಬಾಯಿ ಸತತ ಮೂರು ದಶಕ ರಾಜ್ಯದ ಆಳ್ವಿಕೆ ನಿಭಾಯಿಸಿ ನಾರಿ ಶಕ್ತಿಯನ್ನು ಎತ್ತಿಹಿಡಿದವರು. ಅತಿ ಕಡಿಮೆ ವಯಸ್ಸಿನಲ್ಲಿ ಬಾಲ್ಯ ವಿವಾಹವಾಗಿ ಪತಿಯನ್ನೇ ಕಳೆದು ಕೊಂಡ ಅವರು ಇಡೀ ರಾಜ್ಯಭಾರವನ್ನು ಹತೋಟಿಗೆ ತಂದು ಬಾಲ್ಯವಿವಾಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಿದರು ಎಂದರು.ಮಹಿಳಾ ಸಬಲೀಕರಣಕ್ಕಾಗಿ ನೇಯ್ಗೆ ವೃತ್ತಿ, ಹತ್ತಿ ಬೆಳೆ ಕೃಷಿ ಹಾಗೂ ಆಭರಣ ತಯಾರಿಸುವ ತರಬೇತಿಗಳನ್ನು ಹೆಣ್ಣು ಮಕ್ಕಳಿಗೆ ಒದಗಿಸಿ ಸ್ವಾವಲಂಬಿ ಬದುಕಿಗೆ ಭದ್ರ ಬುನಾದಿ ಹಾಕಿದ್ದರು. ಅಲ್ಲದೇ ರಾಜ್ಯದ ಆಳ್ವಿಕೆಯಲ್ಲೂ ಮಹಿಳಾ ಸೈನ್ಯ ವನ್ನು ಬಲಿಷ್ಠಗೊಳಿಸಿ ವಿರೋಧಿ ಪಡೆಗಳ ಆಕ್ರಮಣದಿಂದ ಗೆಲುವು ಸಾಧಿಸಿದ ಕೀರ್ತಿ ಅವರಿಗೆ ದಕ್ಕಿದೆ ಎಂದು ಹೇಳಿದರು.ದೇಶದ ಹನ್ನೇರಡು ಜ್ಯೋರ್ತಿಲಿಂಗ ಜೀರ್ಣೋದ್ದಾರ, ನಾಡಿನ ಕರಾವಳಿ ಪ್ರದೇಶದ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿ ಭವಿಷ್ಯದ ಪ್ರಜೆಗಳಿಗೆ ಭಾರತೀಯ ಸಂಸ್ಕೃತಿಗೆ ಜೀವ ತುಂಬಿದವರು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಹಲ್ಯಾರ ಹೆಸರಿನಲ್ಲಿ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯ ಮತ್ತು ಗ್ರಂಥಾಲಯ ನಿರ್ಮಿಸಿ ಗೌರವಿಸಿದೆ ಎಂದರು.ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸ್ತ್ರೀ ಸಮಾಜ ಶೈಕ್ಷಣಿಕ, ಆರ್ಥಿಕ ಪ್ರಗತಿ ಹೊಂದಲು ಸ್ತ್ರೀಶಕ್ತಿ ಸಂಜೀವಿನಿಯಡಿ ಸ್ವಾವಲಂಬಿ ಉತ್ಪನ್ನಗಳಿಗೆ ಒತ್ತು ನೀಡಿದ ಪರಿಣಾಮ ಸಂಜೀವಿನಿ ಒಕ್ಕೂಟದಿಂದ 500 ಕೋಟಿ ವಹಿವಾಟು ನಡೆಸಿ ಸಾಧನೆ ಮಾಡಿವೆ. ಆದರೆ, ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್‌ಗಳಲ್ಲಿ ಗಲಾಟೆ ಮಾಡಿಕೊಳ್ಳುವ ಸ್ಥಿತಿ ನಿರ್ಮಿಸಿದೆ ಎಂದು ಆರೋಫಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಮಾತನಾಡಿ, ರಾಷ್ಟ್ರದಲ್ಲಿ ಮಹಾ ಪುರುಷರು ಸಾಧನೆಗೈಯಲು ತಾಯಿ, ಮಡದಿ ಬೆನ್ನಿಂದ ಶಕ್ತಿಯಾಗಿ ನಿಂತಿರಲು ಸಾಧ್ಯವಾಗಿದೆ. ಹೀಗಾಗಿ ನಾರಿಯ ಶಕ್ತಿ ಅತ್ಯಂತ ಪರಿಣಾಮಕಾರಿಯಾಗಿದೆ. ಅದೇ ರೀತಿ ಅಹಲ್ಯರ ಜೀವನಚರಿತ್ರೆಗಳನ್ನು ಪಾಲಕರು ಸೇರಿದಂತೆ ಮಕ್ಕಳು ಕೆಲ ಕಾಲ ಓದಬೇಕು ಎಂದು ತಿಳಿಸಿದರು.
--------------------