ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ತಾಲೂಕಿನ ಅಹಿಂದ ಸಮುದಾಯ, ವಿವಿಧ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ಕುರುಬ ಸಮುದಾಯದ ಮುಖಂಡ ಯಲಿಯೂರು ನಾಗಣ್ಣ ಮಾತನಾಡಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ನಡೆದುಕೊಂಡಿದ್ದಾರೆ. ಅಂತವರಿಗೆ ಖಾಸಗಿಯವರು ನೀಡಿದ ದೂರನ್ನು ಮುಂದಿಟ್ಟುಕೊಂಡು ಒಂದೇ ದಿನದಲ್ಲಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಇದೀಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಬಡವರ ಪರ ಆಡಳಿತ ನೀಡಿರುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಮಾಡಿರುವ ಹುನ್ನಾರ ಎಂದು ಆರೋಪಿಸಿದರು.
ಲೋಕಾಯುಕ್ತ ೧೦ ತಿಂಗಳ ಹಿಂದೆ ತನಿಖೆ ನಡೆಸಿ ಕೆಲವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರೂ ಆ ಕುರಿತು ರಾಜ್ಯಪಾಲರು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಸಿದ್ದರಾಮಯ್ಯ ವಿಚಾರದಲ್ಲಿ ಆತುರ ತೋರಿದ್ದಾರೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ. ಈ ಕೂಡಲೇ ರಾಜ್ಯಪಾಲರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ೧೩೬ ಸ್ಥಾನ ಗೆದ್ದು ಸುಭದ್ರವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರಿಂದ ನಡೆಯುತ್ತಿದೆ. ಇದಕ್ಕೆ ಪಕ್ಷ ಹೆದರುವುದಿಲ್ಲ. ಕಾಂಗ್ರೆಸ್ ಹಾಗೂ ರಾಜ್ಯದ ಬಡಜನರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇದ್ದೇವೆ. ಕೂಡಲೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ರದ್ದು ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಜಯಕಾಂತ್ ಚಾಲುಕ್ಯ ಮಾತನಾಡಿ, ಅಹಿಂದ ಮತ್ತು ಶೋಷಿತ ವರ್ಗದ ಹಿತ ಕಾಯುತ್ತಾ ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕೇಂದ್ರದ ಎನ್‌ಡಿಎ ಸರ್ಕಾರ ರಾಜ್ಯಪಾಲರ ಮೂಲಕ ಹುನ್ನಾರ ಮಾಡಿದೆ. ಶೋಷಿತ ಸಮುದಾಯ ಹಾಗೂ ಅಹಿಂದ ಸಮುದಾಯಗಳು ಇದಕ್ಕೆ ಅವಕಾಶ ಕೊಡುವುದಿಲ್ಲ. ನಾವು ಸದಾ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲಲಿದ್ದೇವೆ ಎಂದರು.ಕಾಂಗ್ರೆಸ್ ಒಬಿಸಿ ಘಟಕದ ನಗರ ಅಧ್ಯಕ್ಷ ಮಂಗಳವಾರಪೇಟೆ ರಾಘವೇಂದ್ರ, ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶ್, ಕಾಂಗ್ರೆಸ್ ಒಬಿಸಿಯ ವಿವೇಕ್ ವೆಂಕಟೇಶ್, ನಗರಸಭಾ ಸದಸ್ಯರಾದ ವಾಸೀಲ್ ಅಲಿಖಾನ್, ಲಿಯಾಕತ್, ಸಾಬಿರ್, ಮುಖಂಡರಾದ ಚಂದ್ರಸಾಗರ್, ಪಿ.ಡಿ.ರಾಜು, ಕೋಕಿಲಾರಾಣಿ, ಕೆ.ಟಿ.ಲಕ್ಷ್ಮಮ್ಮ, ಸಂತೋಷ್ ಇತರರಿದ್ದರು.