ಅಹಿಂದ, ಸರ್ಕಾರದ ನಡುವೆ ಸೇತುವೆಯಾಗುವೆ: ಎಸ್‌.ಪಿ.ಮುದ್ದಹನುಮೇಗೌಡ

KannadaprabhaNewsNetwork | Published : Apr 2, 2024 1:03 AM

ಸಾರಾಂಶ

ನಾನು ಅಹಿಂದ ಸಮಾಜ ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದ್ದು, ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ಮತ್ತು ಬೆಂಬಲ ನನಗೆ ನೀಡಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು ನಾನು ಅಹಿಂದ ಸಮಾಜ ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದ್ದು, ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ಮತ್ತು ಬೆಂಬಲ ನನಗೆ ನೀಡಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮನವಿ ಮಾಡಿದರು. ನಗರದಲ್ಲಿ ಸೋಮವಾರ ನೂತನವಾಗಿ ಪ್ರಾರಂಭವಾದ ಅಹಿಂದ ಸಂಘಟನಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಮಾಜವಾಗಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದುವರೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.

ನಿಮ್ಮ ಹಕ್ಕುಗಳು ಹಾಗೂ ಸರ್ಕಾರದ ಸವಲತ್ತುಗಳನ್ನು ಈ ವರ್ಗದ ಜನರಿಗೆ ನ್ಯಾಯಯುತವಾಗಿ ಕೊಡಿಸುವ ಕೆಲಸ ಮಾಡಿ. ಜನಪ್ರತಿನಿಧಿಗಳು ಯಾರೇ ಆಗಿರಲಿ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದಾಗ ಎಚ್ಚರಿಸುವ, ತಿದ್ದಿ ಸರಿಯಾದ ದಾರಿಗೆ ತರುವ ಶಕ್ತಿ ನಿಮ್ಮಲ್ಲಿದೆ. ಕಚೇರಿ ಉದ್ಘಾಟನೆ ಮಾಡಿ ಸುಮ್ಮನಾಗುವುದಲ್ಲ. ಜನಪರ, ಸಮಾಜಪರವಾಗಿ ಕೆಲಸ ಮಾಡಿ ಉದ್ದೇಶವನ್ನು ಈಡೇರಿಸಿಕೊಳ್ಳಬೇಕು. ಅಹಿಂದ ಶಕ್ತಿಯಾಗಿರುವ ಸಿದ್ದರಾಮಯ್ಯನವರು ಹಲವಾರು ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸಿದ್ದು ಅದನ್ನು ಸಮಪರ್ಕವಾಗಿ ನಿರ್ವಹಿಸುವ ಜವಾಬ್ದಾರಿ ನಿಮ್ಮದಾಗಿದೆ. ಚುನಾವಣೆಯಲ್ಲಿ ನನಗೆ ನಿಮ್ಮ ಆಶೀರ್ವಾದ ಬೇಕಿದ್ದು ನಿಮ್ಮ ಸಮಾಜದ ಒಳಿತಿಗಾಗಿ ಶ್ರಮಿಸುತ್ತೇನೆ. ನಾನು ನಿಮ್ಮ ದನಿಯಾಗಿ ನಿಮ್ಮ ಪರವಾಗಿ ನಿಲ್ಲುತ್ತೇನೆ. ನಿಮ್ಮ ಬೆಂಬಲ ಸಹಕಾರವನ್ನು ಈ ಬಾರಿ ನನಗೆ ನೀಡಿ ಎಂದು ಕಳಕಳಿಯ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಅಹಿಂದ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ್ ಹಾರೋಘಟ್ಟ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಚಂದ್ರೇಗೌಡ, ನಗರಸಭೆ ಸದಸ್ಯರಾದ ಸೊಪ್ಪುಗಣೇಶ್, ಭಾರತಿ, ಆಶೀಫಾಬಾನು, ಸಮಾಜದ ಮುಖಂಡರಾದ ಸಿದ್ದರಾಮಣ್ಣ ಶಿವಪುರ, ಮಹಲಿಂಗಪ್ಪ ಹೊನ್ನೇನಹಳ್ಳಿ, ಮಹೇಶ್, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮಾಜಗಳ ಮುಖಂಡರುಗಳು ಭಾಗವಹಿಸಿದ್ದರು.

Share this article