ಬೆಂಗಳೂರು : ಏರ್‌ ಶೋ ವಸ್ತು ಪ್ರದರ್ಶನದಲ್ಲಿ ಕೃತಕ ಬುದ್ಧಿಮತ್ತೆ, ಡೀಪ್‌ ಲರ್ನಿಂಗ್‌ ಅಬ್ಬರ

KannadaprabhaNewsNetwork |  
Published : Feb 12, 2025, 01:32 AM ISTUpdated : Feb 13, 2025, 01:11 PM IST
MRMS | Kannada Prabha

ಸಾರಾಂಶ

ಕಾರ್ಗಿಲ್‌ ಯುದ್ಧದ ಆರಂಭದಲ್ಲಿ ನಡೆದ ಕ್ಯಾಪ್ಟನ್‌ ಸೌರಭ್‌ ಕಾಲಿಯಾ ಹತ್ಯೆಯಂತ ಭೀಕರತೆ ಮರುಕಳಿಸುವುದನ್ನು ತಪ್ಪಿಸಲು ಇಲ್ಲಿ ಮಾನವ ರಹಿತ ಗಸ್ತು ವಾಹನವಿದೆ.

ಮಯೂರ್‌ ಹೆಗಡೆ

 ಬೆಂಗಳೂರು : ಕಾರ್ಗಿಲ್‌ ಯುದ್ಧದ ಆರಂಭದಲ್ಲಿ ನಡೆದ ಕ್ಯಾಪ್ಟನ್‌ ಸೌರಭ್‌ ಕಾಲಿಯಾ ಹತ್ಯೆಯಂತ ಭೀಕರತೆ ಮರುಕಳಿಸುವುದನ್ನು ತಪ್ಪಿಸಲು ಇಲ್ಲಿ ಮಾನವ ರಹಿತ ಗಸ್ತು ವಾಹನವಿದೆ. ಇನ್ನೊಂದೆಡೆ ಬೆಟ್ಟದಲ್ಲಿ ಇಟ್ಟ ಮಷಿನ್‌ ಗನ್‌ ಯೋಧನ ಅಗತ್ಯವಿಲ್ಲದೆ ತಾನೇ ಶತ್ರುವನ್ನು ಗುರುತಿಸಿ ಗುರಿ ನಿಗದಿ ಪಡಿಸಿಕೊಂಡು ಹತ್ಯೆ ಮಾಡುತ್ತದೆ. ಜೇಡದಂತೆ ಸಾಗುವ ಯಂತ್ರ ಹುದುಗಿಸಿಟ್ಟ ಬಾಂಬ್‌ಗಳನ್ನು ಪತ್ತೆಹಚ್ಚಿ ನಾಶ ಮಾಡುತ್ತದೆ.

ಇವೆಲ್ಲ ಶಸ್ತ್ರಾಸ್ತ್ರಗಳ ಹಿಂದಿರುವುದು ಕೃತಕ ಬುದ್ಧಿಮತ್ತೆ, ದೀಪ್‌ ಲರ್ನಿಂಗ್‌. ಕಳೆದೊಂದು ವರ್ಷದಲ್ಲಿ ಭಾರತೀಯ ಸೈನಿಕರು, ಕಂಪನಿಗಳು ರೂಪಿಸಿರುವ ಈ ಅಸ್ತ್ರಗಳು, ವಾಹನಗಳು ಪ್ರಸಕ್ತ ಏರ್‌ ಶೋ ವಸ್ತು ಪ್ರದರ್ಶನದಲ್ಲಿ ಹೆಚ್ಚು ಗಮನಸೆಳೆಯುತ್ತಿವೆ. ಸೈನಿಕ ಕ್ಷೇತ್ರವನ್ನು ಕೂಡ ಎಐ ವ್ಯಾಪಿಸಿದ್ದು, ಇದರಿಂದ ಮಾನವ ರಹಿತವಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುವುದರಿಂದ ಯೋಧರ ಪ್ರಾಣಹಾನಿ ತಪ್ಪುತ್ತದೆ ಎಂದು ಆರ್ಮಿ ಡಿಸೈನ್‌ ಬ್ಯೂರೋ (ಎಡಿಬಿ) ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಎಕ್ಸ್‌ಪ್ಲೋಡರ್‌ ಯುಜಿವಿ:

ಮೇಜರ್‌ ರಾಜ್‌ಪ್ರಸಾದ್‌ ಆವಿಷ್ಕರಿಸಿರುವ ಮಾನವರಹಿತ ‘ಎಕ್ಸ್‌ಪ್ಲೋಡರ್‌ ಯುಜಿವಿ ಯಂತ್ರ’ ಅಪ್ಪಟ ಸೈನಿಕನಂತೆ ಕೆಲಸ ಮಾಡಬಲ್ಲದು. ಸೈನಿಕರು ತೆರಳಲಾಗದಂತ ದುರ್ಗಮ ಸ್ಥಳ, ಸನ್ನಿವೇಶದಲ್ಲಿ ಇದು ಸ್ಫೋಟಕ, ಐಇಡಿಗಳನ್ನು ಹೊತ್ತು ಸಾಗುತ್ತದೆ. ಗಸ್ತು ನಡೆಸುವ ಇದು, ಶತ್ರು ಸೈನಿಕರ ಅಡಗುತಾಣ ತೆರವು ಕಾರ್ಯಾಚಣೆ ಸನ್ನಿವೇಶದಲ್ಲಿ ‘ಕಾಮಕಾಝಿ’ ರೀತಿ ಅಂದರೆ ತನ್ನನ್ನು ತಾನು ಸ್ಫೋಟಿಸಿಕೊಂಡು ಶತ್ರುವನ್ನೂ ನಾಶ ಮಾಡುತ್ತದೆ. ಜೊತೆಗೆ ಪ್ರಕೃತಿ ವೈಪರೀತ್ಯದ ಪ್ರತಿಕೂಲ ಸಂದರ್ಭದಲ್ಲಿ ನೆರವಾಗಬಲ್ಲದು. ಭಾರತೀಯ ಸೇನೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಖರೀದಿಸಲು ಮುಂದಾಗಿದೆ.

ಇವರೇ ಆವಿಷ್ಕರಿಸಿದ ಇನ್ನೊಂದು ಯಂತ್ರ ‘ಮೊಬೈಲ್‌ ರಿಯಾಕ್ಟಿವ್‌ ಮ್ಯುನಿಷನ್‌ ಸಿಸ್ಟಂ’ (ಎಂಆರ್‌ಎಂಎಸ್‌) ಕೂಡ ಮಾನವ ರಹಿತ ಯಂತ್ರವಾಗಿದ್ದು, ಆಧುನಿಕ ಅಲ್ಗೊರಿದಂ ಅಳವಡಿಸಿಕೊಂಡಿದೆ. ಜೇಡದ ರೀತಿ ನಡೆದು ಶತ್ರು ಪಾಳಯದತ್ತ ಗುಟ್ಟಾಗಿ ಸಾಗಿ ಚಲನವಲನದ ಮೇಲೆ ನಿಗಾ ಇಡಬಲ್ಲದು. ಜೊತೆಗೆ ಶತ್ರು ಟ್ಯಾಂಕರ್‌ಗಳ ಕೆಳಗೆ ನುಸುಳುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಸ್ಫೋಟಕ ಅಳವಡಿಸಿದಲ್ಲಿ ಇನ್ನಷ್ಟು ಪರಿಣಾಮಕಾರಿ ಎಂದು ರಾಜ್‌ಪ್ರಸಾದ್‌ ಹೇಳಿದರು.

ಮಾನವರಹಿತ ಗಸ್ತು ವಾಹನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಸದ್ಯ ಪರಿಶೀಲನೆ ಹಂತದಲ್ಲಿರುವ ‘ಅನ್‌ಮ್ಯಾನ್ಡ್‌ ಗ್ರೌಂಡ್‌ ವೆಹಿಕಲ್’ ಎಐ ಆಧಾರಿತ ವಾಹನ. ಎಲೆಕ್ಟ್ರಿಕ್‌ ಗಿಯರ್‌ಲೆಸ್‌ ವಾಹನವಾದ ಇದು ಗಡಿಯಲ್ಲಿ ಮಾನವರಹಿತವಾಗಿ ಗಸ್ತು ತಿರುಗಬಲ್ಲದು. ಇದರಿಂದ ಯೋಧರ ಜೀವಹಾನಿ ತಡೆಯಬಹುದು. ಜೊತೆಗೆ ಇಬ್ಬರು ಯೋಧರು ಚಾಲನೆ ಮಾಡಿಕೊಂಡೂ ಹೋಗಬಹುದು. ಒಂದು ಬಾರಿ ಚಾರ್ಜ್‌ ಮಾಡಿದಲ್ಲಿ 80 ಕಿ.ಮೀ.ವರೆಗೆ ಪ್ರಯಾಣಿಸಬಲ್ಲದು. ಅಲ್ಟ್ರಾಸಾನಿಕ್‌ ಸೆನ್ಸಾರ್‌, ಅತ್ಯಾಧುನಿಕ ಗಸ್ತು ಕ್ಯಾಮೆರಾ, ಸರ್ಚ್‌ ಲೈಟ್‌ ಒಳಗೊಂಡಿದೆ. ಜೊತೆಗೆ ಕೃತಕ ಬುದ್ಧಿಮತ್ತೆ ಅಳವಡಿಕೆಯೊಂದಿಗೆ ಶತ್ರುಗಳ ಅಡಗುತಾಣ, ಡ್ರೋನ್‌, ಹುದುಗಿಸಿಟ್ಟ ಬಾಂಬ್‌ ಪತ್ತೆ ಮಾಡುವ ಅವಕಾಶವಿದೆ ಎಂದು ಸಂಸ್ಥೆಯ ಪ್ರತಿನಿಧಿ ರಾಜ ತಿಳಿಸಿದರು.

ಶತ್ರುಗಳನ್ನು ಗುರುತಿಸಿ ಗುಂಡಿಕ್ಕುವ ‘ಟೆನ್‌ ಎಐ’

ಯೋಧರಾದ ಕರ್ನಲ್‌ ಆಶಿಷ್‌ ಡೋಗ್ರಾ, ಲೆಫ್ಟಿನೆಂಟ್‌ ಕರ್ನಲ್‌ ಪ್ರಶಾಂತ್‌ ಅಗರ್‌ವಾಲ್‌ ಆವಿಷ್ಕರಿಸಿದ ‘ಟೆನ್‌ ಎಐ ಸಿಸ್ಟಂ’ ಯೋಧನ ನಿರ್ವಹಣೆಯ ಅಗತ್ಯವಿಲ್ಲದೆ ತಾನೇ ಶತ್ರುವನ್ನು ಗುರುತಿಸಿ ಗುರಿ ನಿಗದಿಪಡಿಸಿಕೊಂಡು ಹತ್ಯೆ ಮಾಡುತ್ತದೆ.

‘ಇದು ಕೃತಕ ಬುದ್ಧಿಮತ್ತೆ ಆಧಾರಿತ ಆಯುಧ. ಮಿಡಿಯಂ ಮಷಿನ್‌ ಗನ್‌, ಲೈಟ್‌ ಮಷಿನ್‌ ಗನ್‌ಗಳನ್ನು ಇಲ್ಲಿ ಬಳಸಬಹುದು. ಹಗಲು, ರಾತ್ರಿಯೂ ಇದು ಕಾರ್ಯನಿರ್ವಹಿಸುವಂತೆ ಸೆನ್ಸಾರ್‌, ಲೆನ್ಸ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಟೆನ್‌ ಎಐ 24/7 ಜಾಗೃತವಾಗಿರುತ್ತದೆ. ಇದು ಪೊದೆಯಲ್ಲಿ ಅಡಗಿರುವ ಶತ್ರುವನ್ನು ಕೂಡ ಗುರುತಿಸಿ, ಹತ್ಯೆಗೆ ಸಜ್ಜಾಗುತ್ತದೆ. ಈ ಹಂತದಲ್ಲಿ ನಾವು ಇದನ್ನು ರಿಮೋಟ್‌ ಮೂಲಕವೂ ಕಂಟ್ರೋಲ್‌ ಮಾಡಬಹುದು. ಬೆಟ್ಟ ಪ್ರದೇಶಗಳಲ್ಲಿ ಇವುಗಳನ್ನು ಅಳವಡಿಸುವುದು ಹೆಚ್ಚು ಅನುಕೂಲಕರ. ಒಂದು ವೇಳೆ ಪ್ರಾಣಿಗಳು ಇದ್ದರೆ ಅದನ್ನು ಎಐ ತಾನೇ ಗುರುತಿಸುವ ಸಾಮರ್ಥ್ಯವನ್ನು ಎಐ, ಡೀಪ್‌ ಲರ್ನಿಂಗ್‌ ಮೂಲಕ ನೀಡಲಾಗಿದೆ ಎಂದು ಲೆ.ಕರ್ನಲ್‌ ಪ್ರಶಾಂತ್‌ ಅಗರ್‌ವಾಲ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!