ನ. 3ರಿಂದ ಅನುದಾನಿತ ಖಾಸಗಿ ಶಾಲಾ-ಕಾಲೇಜುಗಳು ಬಂದ್‌: ಹೊರಟ್ಟಿ

KannadaprabhaNewsNetwork |  
Published : Sep 18, 2026, 02:00 AM IST
ಹೊರಟ್ಟಿ | Kannada Prabha

ಸಾರಾಂಶ

ಶಿಕ್ಷಕರ ಕೊರತೆ ಸೇರಿ ಇನ್ನಿತರ ಸಮಸ್ಯೆಗಳಿಂದಾಗಿ ಅನುದಾನಿತ ಶಾಲಾ-ಕಾಲೇಜುಗಳು ಮುಚ್ಚುವ ಹಂತ ತಲುಪಿವೆ. ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ನ. 3ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಅನಿರ್ದಿಷ್ಟಾವಧಿ ವರೆಗೆ ಶಾಲಾ-ಕಾಲೇಜು ಬಂದ್‌ ಮಾಡಿ ಹೋರಾಟ ಮಾಡಲಾಗುವುದು.

ಹುಬ್ಬಳ್ಳಿ:

ಶಿಕ್ಷಕರ ಕೊರತೆ ಸೇರಿ ಇನ್ನಿತರ ಸಮಸ್ಯೆಗಳಿಂದಾಗಿ ಅನುದಾನಿತ ಶಾಲಾ-ಕಾಲೇಜುಗಳು ಮುಚ್ಚುವ ಹಂತ ತಲುಪಿವೆ. ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ನ. 3ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಅನಿರ್ದಿಷ್ಟಾವಧಿ ವರೆಗೆ ಶಾಲಾ-ಕಾಲೇಜು ಬಂದ್‌ ಮಾಡಿ ಹೋರಾಟ ಮಾಡಲಾಗುವುದು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವಿಧಾನ ಪರಿಷತ್‌ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆ, ಸರ್ಕಾರದ ಶಿಕ್ಷಣ ವಿರೋಧಿ ನೀತಿಯನ್ನು ಬಿಚ್ಚಿಟ್ಟರು. ಅಲ್ಲದೇ, ಶಿಕ್ಷಣ ಇಲಾಖೆ ಮೇಲೆ ಸಚಿವರಿಗೆ ಹಿಡಿತವೇ ಇಲ್ಲ. ಅಧಿಕಾರಿಗಳೇ ನಡೆಸುತ್ತಿದ್ದಾರೆ ಎಂದು ಟೀಕಿಸಿ, ಇಲಾಖೆ ಹೊರಡಿಸಿದ ಆದೇಶದ ಪ್ರತಿಯನ್ನು ಪ್ರದರ್ಶಿಸಿದರು.

ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗದೆ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 29 ಸಾವಿರಕ್ಕೂ ಹೆಚ್ಚು ಶಿಕ್ಷಕ ಹುದ್ದೆ ಖಾಲಿ ಇವೆ. ಕೂಡಲೇ ಇವುಗಳ ಭರ್ತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಪರಿಕಲ್ಪನೆ ಉತ್ತಮವಾಗಿದೆ. ಒಂದೇ ಕಡೆ ನರ್ಸರಿಯಿಂದ ಪಿಯು ವರೆಗೆ ಶಿಕ್ಷಣ ಸಿಗಬೇಕು, ಒಬ್ಬರೇ ಪ್ರಾಂಶುಪಾಲರಿರಬೇಕು ಎಂಬುದು ಇದರ ನಿಯಮ. ಆದರೆ, ಇತ್ತೀಚಿಗೆ 2-3 ಕಿ.ಮೀ. ಅಂತರದಲ್ಲಿರುವ ಶಾಲೆಗಳನ್ನು ಕೆಪಿಎಸ್‌ ಶಾಲೆಗಳೆಂದು ಅವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ದಿನಕ್ಕೊಂದು ಅವೈಜ್ಞಾನಿಕ ನಿಯಮ ಘೋಷಿಸುವ ಮೂಲಕ ಶಿಕ್ಷಣ ವ್ಯವಸ್ಥೆಯೇ ಸಂಪೂರ್ಣ ಹದಗೆಟ್ಟಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಅನುದಾನಿತ ಶಾಲೆಗಳು ಉತ್ತಮ ಸೌಲಭ್ಯ ಹೊಂದಿದ್ದು, ಇವುಗಳ ಸಮೀಪ ಹೊಸದಾಗಿ ಕೆಪಿಎಸ್ ಮತ್ತು ಪಿ.ಎಂ.ಶ್ರೀ ಶಾಲೆಗಳನ್ನು ತೆರೆಯಬಾರದು ಎಂದು ಆಗ್ರಹಿಸಿದ ಹೊರಟ್ಟಿ, ತೃತೀಯ ಭಾಷೆಯ ವಿಷಯಗಳಿಗೆ ಅಂಕಗಳ ಬದಲು ಗ್ರೇಡ್ ನೀಡಲು ಹೊರಟಿದ್ದರು. ಇಂತಹ ಹಲವು ಅವೈಜ್ಞಾನಿಕ ನೀತಿಯಿಂದಾಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದರ ಸುಧಾರಣೆಗ ಸರ್ಕಾರ ಇಚ್ಛಾಶಕ್ತಿಯನ್ನೇ ತೋರುತ್ತಿಲ್ಲ ಎಂದು ಆಕ್ಷೇಪಿಸಿದರು.

ಬರೀ ಗ್ಯಾರಂಟಿ:

ಶಿಕ್ಷಕರ ನೇಮಕಾತಿಗೆ ಸರ್ಕಾರದಲ್ಲಿ ಹಣ ಇಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಗಮನ ಹರಿಸಲಾಗುತ್ತಿದೆಯೇ ಹೊರತು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕಿಂಚಿತ್ತೂ ಆಸಕ್ತಿ ತೋರುತ್ತಿಲ್ಲ ಎಂದು ಕಿಡಿಕಾರಿದ ಹೊರಟ್ಟಿ, 2006ರ ಏ.1ಕ್ಕೂ ಮುನ್ನ ನೇಮಕಾತಿಯಾಗಿ ನಂತರ ಅನುದಾನಕ್ಕೊಳಪಟ್ಟ ಅನುದಾನಿತ ಶಾಲಾ ನೌಕರರು ಮತ್ತು ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಸೌಲಭ್ಯ ನೀಡಬೇಕು. ಅನುದಾನಿತ ಶಾಲಾ ನೌಕರರಿಗೆ ಕಾಲ್ಪನಿಕ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

2020ರ ವರೆಗೆ ಅನುದಾನಿಕ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಿವೃತ್ತಿ, ರಾಜೀನಾಮೆ ಹಾಗೂ ಇನ್ನಿತರ ಕಾರಣದಿಂದ ಖಾಲಿಯಾದ ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ ಹೊರಡಿಸಿದ್ದು, ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ದೀರ್ಘ ಅವಧಿಯಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಕಾಯಂ ನೇಮಕಾತಿಯಲ್ಲಿ ಸೇವಾ ಕೃಪಾಂಕ ನೀಡಬೇಕು'''''''' ಎಂದು ಮನವಿ ಮಾಡಿದರು.

ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ ಸರಳೀಕರಣಗೊಳಿಸಬೇಕು. 1995ರ ನಂತರ ಆರಂಭವಾದ ಕನ್ನಡ ಮಾಧ್ಯಮ, ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೊಳಪಡಿಸಬೇಕು ಎಂದ ಅವರು, ಶಿಕ್ಷಕರ ನೇಮಕಾತಿಗೆ ಸರ್ಕಾರದಲ್ಲಿ ಹಣ ಇಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಗಮನ ಹರಿಸಲಾಗುತ್ತಿದೆಯೇ ಹೊರತು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಆಸಕ್ತಿ ತೋರುತ್ತಿಲ್ಲ ಎಂದರು.

ನ. 2ರಂದು ಧಾರವಾಡದಲ್ಲಿ ಬೃಹತ್‌ ರ್‍ಯಾಲಿ ನಡೆಯಲಿದ್ದು ನ.3ರಿಂದ ಅನಿರ್ದಿಷ್ಟಾವಧಿ ವರೆಗೆ ಶಾಲಾ-ಕಾಲೇಜ್‌ ಬಂದ್‌ ಮಾಡಲಾಗುವುದು. ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದಲ್ಲಿ ಈ ಹೋರಾಟ ನಡೆಸಲಾಗುವುದು ಎಂದು ಹೊರಟ್ಟಿ ತಿಳಿಸಿದರು.

ಈ ವೇಳೆ ಸಂಘದ ಸಂದೀಪ ಬೂದಿಹಾಳ, ಜಿ.ಆರ್‌. ಭಟ್‌, ನವೀದ ಮುಲ್ಲಾ, ವಿ.ಎಸ್‌. ಹುದ್ದಾರ, ಬಸವರಾಜ ಮಳಗಿ, ಎಸ್‌.ವಿ. ಪಟ್ಟಣಶೆಟ್ಟಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣದಲ್ಲಿಯೇ ಪ್ರಥಮ ಹಂತದ ಚಿಕಿತ್ಸೆ ದೊರೆಯಬೇಕು: ಬೊಮ್ಮಾಯಿ
ಹಾನಗಲ್ಲ ತಾಲೂಕು ಬರ ಘೋಷಣೆ ನೆಪಕ್ಕೆ ಮಾತ್ರ, ಪೂರ್ಣ ಬರ ಘೋಷಿಸಬೇಕು