ಕನ್ನಡಪ್ರಭ ವಾರ್ತೆ ಮೈಸೂರು
ಎನ್.ಟಿ.ಎ ಅನ್ನು ರದ್ದುಪಡಿಸಬೇಕು, ನೀಟ್-ಯುಜಿ, ಯುಜಿಸಿ- ನೆಟ್ ಮತ್ತು ನೀಟ್-ಪಿಜಿಗೆ ಸಂಬಂಧಿಸಿದ ಸಂಪೂರ್ಣ ಹಗರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಹಗರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ಕಟ್ಟುನಿಟ್ಟಾಗಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ರಾಜ್ಯ ಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿಯವರು ಮೈಸೂರು ವಿವಿ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಗುರುವಾರ ಪ್ರತಿಭಟಿಸಿದರು.ಜಿಲ್ಲಾ ಉಪಾಧ್ಯಕ್ಷ ನಿತಿನ್ ಮಾತನಾಡಿ, ನೀಟ್-2024ರ ಫಲಿತಾಂಶದಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವುದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕೆಲವು ದಿನಗಳ ಹಿಂದೆ ಯುಜಿಸಿ- ನೆಟ್ ಪರೀಕ್ಷೆ ಮುಗಿದ ಕೇವಲ 24 ಗಂಟೆಗಳ ನಂತರ ರದ್ದುಗೊಳಿಸಲಾಗಿದೆ. ಸಿಎಸ್ಐಆರ್ ನೆಟ್ ಕೂಡ ಮುಂದೂಡಲಾಗಿದೆ. ಈ ಎಲ್ಲಾ ಘಟನೆಗಳು ನೀಟ್-ಯುಜಿ 2024 ಹಗರಣದ ಹಿನ್ನೆಲೆಯಲ್ಲಿ ಸಂಭವಿಸಿದ್ದು, ಇದು ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಅತಿದೊಡ್ಡ ಹಗರಣವಾಗಿದೆ ಎಂದು ಆರೋಪಿಸಿದರು.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಕಿಂಚಿತ್ತೂ ಕಾಳಜಿ ವಹಿಸದೇ ನಿರ್ಲಕ್ಷ್ಯ ತೋರಿಸುತ್ತಿರುವುದು ಕೇಂದ್ರ ಸರ್ಕಾರದ ಮತ್ತು ಎನ್.ಟಿ.ಎಯ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇದರ ವಿರುದ್ಧ ದೇಶದ ವಿವಿಧ ಮೂಲೆಗಳಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ವಿದ್ಯಾರ್ಥಿಗಳ ಹೋರಾಟದ ಒತ್ತಡದಲ್ಲಿ ಸರ್ಕಾರವು ಎನ್.ಟಿ.ಎಯ ಮಹಾನಿರ್ದೇಶಕರನ್ನು ತೆಗೆದು ಹಾಕುವ ಮೂಲಕ ಹಗರಣದ ಆರೋಪಗಳನ್ನು ಮರೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ಎನ್.ಟಿ.ಎ ರದ್ದುಗೊಳಿಸುವ ಮತ್ತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಯ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಎಐಡಿಎಸ್ಒ ಜಿಲ್ಲಾಧ್ಯಕ್ಷ ಸುಭಾಷ್, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷೆ ಸ್ವಾತಿ, ಜಿಲ್ಲಾ ಸೆಕ್ರೆಟಿರೇಟ್ ಸದಸ್ಯರಾದ ಚಂದ್ರಿಕಾ, ಹೇಮಾ, ಅಂಜಲಿ, ದಿಶಾ, ಅಭಿ, ಮುತ್ತು, ತೇಜು ಹಾಗೂ ಮಾನಸಗಂಗೋತ್ರಿಯ ವಿದ್ಯಾರ್ಥಿಗಳು ಇದ್ದರು.