ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ರೈತರು ಅಲ್ಲಿಂದ ಕೇಂದ್ರ ಬಸ್ ನಿಲ್ದಾಣ ಮುಖಾಂತರ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರಸಕ್ತ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ರೈತರು ಅತೀ ಹೆಚ್ಚಾಗಿ ಹತ್ತಿ ಬೆಳೆಯನ್ನು ಬೆಳೆದಿದ್ದು, ಆರಂಭದಲ್ಲಿ ಮಳೆಯ ಅಭಾವ. ನಂತರದಲ್ಲಿ ಮಳೆಯ ಹೆಚ್ಚಳದಿಂದ ಹತ್ತಿ ಬೆಳೆಯ ಇಳುವರಿಯು ಗಣನೀಯವಾಗಿ ಇಳಿಕೆಯಾಗಿದೆ, ಇದರಿಂದಾಗಿ ಗುಣಮಟ್ಟದ ಹತ್ತಿ ಕೈ ಸೇರದಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಹತ್ತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಇದು ರೈತರಿಗೆ ನಷ್ಟವನ್ನುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಎಕರೆಗೆ 6 ರಿಂದ 8 ಎಂಟು ಕ್ವಿಂಟಲ್ ಇಳುವರಿ ಬರುತ್ತಿದೆ. ಒಂದು ಎಕರೆಗೆ 30 ರು. ರಿಂದ 40 ಸಾವಿರ ರು. ಖರ್ಚಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹತ್ತಿ ಕ್ವಿಂಟಾಲ್‌ಗೆ 5,500 ರು. ರಿಂದ 7500 ರು. ಬೆಲೆ ಇದೆ. ರೈತರಿಂದ ಅತ್ಯಂತ ಕನಿಷ್ಟ ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಈ ಬೆಲೆಗೆ ಮಾರಾಟ ಮಾಡಿದರೆ ಆರ್ಥಿಕ ನಷ್ಟ ಉಂಟಾಗಲಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವ್ಯಾಪಾರಸ್ಥರು, ಸಂಘಟನೆಗಳ ಅಧಿಕಾರಿಗಳ ಸಭೆ ಕರೆಯಬೇಕು ಹಾಗೂ ಹತ್ತಿಯ ಮಾರಾಟ ಮಾಡುವಾಗ ಬೆಲೆ ನಿಗದಿ ಮಾಡಿದ ಬಳಿಕ ಫ್ಯಾಕ್ಟರಿ ಗಳಲ್ಲಿ ಬೆಲೆ ಕಡಿಮೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಹತ್ತಿ ಬೆಳೆಯನ್ನು ಪ್ರತಿ ಕ್ವಿಂಟಾಲ್‌ಗೆ 10 ಸಾವಿರದಂತೆ ಖರೀದಿ ಮಾಡಲು ಕಾಟನ್ ಕಾರ್ಪೋ ರೇಷನ್ ಆಫ್ ಇಂಡಿಯಾ (ಸಿಸಿಐ) ಮೂಲಕ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದೂ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಮಲ್ಲನಗೌಡ ಅಂಚೆಸುಗೂರು, ಮುಖಂಡರಾದ ದುರ್ಗಣ್ಣ ಆಡಕಲಗುಡ್ಡ, ಶರಣಪ್ಪ ಅಡಕಲಗುಡ್ಡ, ಹುಲಿಗೆಪ್ಪ ಭೂಮನಗುಂಡ, ವೀರೇಶ ಜಕ್ಕಲದಿನ್ನಿ ಉಪಸ್ಥಿತರಿದ್ದರು.