ಮೂರು ವರ್ಷದಲ್ಲಿ 3 ಸಾವಿರ ಪಬ್ಲಿಕ್ ಶಾಲೆ ಪ್ರಾರಂಭಿಸುವ ಗುರಿ: ಸಚಿವ ಮಧು ಬಂಗಾರಪ್ಪ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಮೂರು ವರ್ಷದಲ್ಲಿ ಮೂರು ಸಾವಿರ ಶಾಲೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾ ಗಿದೆ. ಪಾಲಕರೇ ಸ್ವ ಇಚ್ಚೆಯಿಂದ ಬಂದು ಮಕ್ಕಳನ್ನು ಆ ಸರ್ಕಾರಿ ಶಾಲೆಗೆ ದಾಖಲಿಸುವ ವಾತಾವರಣ ನಿರ್ಮಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಚಿತ್ರದುರ್ಗದ ವಿಶ್ವಮಾನವ ವಿದ್ಯಾಸಂಸ್ಥೆಯ ರಜತ ಮಹೋತ್ಸವದಲ್ಲಿ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಮೂರು ವರ್ಷದಲ್ಲಿ ಮೂರು ಸಾವಿರ ಶಾಲೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾ ಗಿದೆ. ಪಾಲಕರೇ ಸ್ವ ಇಚ್ಚೆಯಿಂದ ಬಂದು ಮಕ್ಕಳನ್ನು ಆ ಸರ್ಕಾರಿ ಶಾಲೆಗೆ ದಾಖಲಿಸುವ ವಾತಾವರಣ ನಿರ್ಮಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ತಾಲೂಕಿನ ಸೀಬಾರ ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ದುಃಸ್ಥಿತಿಯ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹೆದರುತ್ತಿದ್ದಾರೆ. ಈ ಅಂಶವವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

2024 ಡಿಸೆಂಬರ್ ಅಂತ್ಯಕ್ಕೆ ರಾಜ್ಯದ ಎಲ್ಲ ಶಾಲೆಗಳಿಗೂ ಡೆಸ್ಕ್ ವ್ಯವಸ್ಥೆ ಮಾಡಲಾಗುತ್ತದೆ. ಬುದ್ಧಿವಂತಿಕೆ, ವಿದ್ಯಾಭ್ಯಾಸದಲ್ಲಿ ಯಾವ ಜಾತಿ, ಧರ್ಮ ಬರುವುದಿಲ್ಲ, ಎಲ್ಲರೂ ಒಂದೇ. ಮುಖ್ಯವಾಗಿ ಮಕ್ಕಳಿಗೆ ಸಮಾನತೆ ಕೊಡಬೇಕು ಎಂದು ತಿಳಿಸಿದರು. ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯನ್ನು 25 ವರ್ಷಗಳಿಂದ ಕಟ್ಟಿ ಬೆಳೆಸುತ್ತಿರುವ ಸಂಸ್ಥೆಯ ರೂವಾರಿ ಎಚ್.ಜಲೀಲ್ ಸಾಬ್, ಕಾರ್ಯದರ್ಶಿ ನೀಲಕಂಠ ದೇವರು ಅವರ ಕಾರ್ಯ ಎಲ್ಲರಿಗೂ ಮಾದರಿ. 1,900 ಮಕ್ಕಳಿರುವ ಈ ಶಾಲೆಯಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಶಿಕ್ಷಣ ಒದಗಿಸಲಾಗುತ್ತಿದೆ. ಸರ್ಕಾರ ಮಾಡುವ ಕೆಲಸವನ್ನು ವಿಶ್ವಮಾನವ ಶಾಲೆ ಮಾಡಿದೆ. ಈ ಸಂಸ್ಥೆಗೆ ಶಕ್ತಿ ಮೀರಿ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ವಿಶ್ವಮಾನವ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ನೀಲಕಂಠದೇವ ಮಾತನಾಡಿ, ನಾವು ಗ್ರಾಮೀಣ ಪ್ರದೇಶಗಳಲ್ಲಿ 25 ವರ್ಷಗಳ ಹಿಂದೆ ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ ಅವರ ಹೊಸ ಭವಿಷ್ಯಕ್ಕಾಗಿ ಶಾಲೆ ಪ್ರಾರಂಭಿಸಲಾಯಿತು. ಬಡತನದಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲಾಗದ ಕೂಲಿನಾಲಿ ಮಾಡುವ ಅನೇಕರ ಮಕ್ಕಳು ನಮ್ಮಲ್ಲಿ ಇದ್ದಾರೆ. ‌ಅನೇಕರು ಉತ್ತಮ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಮಾತನಾಡಿ, ರಜತ ಮಹೋತ್ಸವ ಮಾಡುವ ಈ ಶಾಲೆಗೆ ನಮ್ಮ ಸರ್ಕಾರ ಮತ್ತು ವೈಯುಕ್ತಿಕವಾಗಿ ಸಹಕಾರ ನೀಡಲಾಗುತ್ತದೆ. ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ ಎಂದರು. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಎಂಎಲ್ ಸಿ ನವೀನ್ ಶಾಲೆಗೆ ಭೇಟಿ ಕೊಟ್ಟು ಶಾಲೆಗೆ ಬೇಕಾದ ಅಗತ್ಯ ನೇರವು ನೀಡುವುದಾಗಿ ತಿಳಿಸಿದರು.

ಶಾಲಾ ಶಿಕ್ಷಣ ఇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್, ಮಾಜಿ ಸಚಿವ ಎಚ್‌. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿದರು. ಮಾಜಿ ಶಾಸಕ ಎ.ವಿ. ಉಮಾಪತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀ‌ರ್, ಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠದೇವ, ರೂವಾರಿ ಎಚ್.ಜಲೀಲ್ ಸಾಬ್, ಬಿಜೆಪಿ ಯುವ ಮುಖಂಡ ರಘುಚಂದನ್ ಇದ್ದರು.

Share this article