ರಾಜ್ಯದಲ್ಲೇ ಯತ್ತಂಬಾಡಿ ಸರ್ಕಾರಿ ಶಾಲೆಯನ್ನು ಮಾದರಿ ಮಾಡುವ ಗುರಿ: ಉದ್ಯಮಿ ಹೇಮಂತ್

KannadaprabhaNewsNetwork |  
Published : Jan 11, 2026, 01:45 AM IST
10ಕೆಎಂಎನ್ ಡಿ14 | Kannada Prabha

ಸಾರಾಂಶ

ಸರ್ಕಾರಿ ಶಾಲೆ ಎಂದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ಎಂಬ ಭಾವನೆ ಇದೆ. ಇದನ್ನೆಲ್ಲಾ ಹೊರತುಪಡಿಸಿ ಈ ಶಾಲೆ ನಮ್ಮ ಶಾಲೆ, ನಮ್ಮೆಲ್ಲರ ಶಾಲೆ ಎಂಬ ಗೌರವ ನಮ್ಮಲ್ಲಿ ಬೆಳೆಯಬೇಕು. ಜಯರಾಮು ಮೂಲಕ ನಾವು ಈ ಊರಿಗೆ ಕಾಲಿಟ್ಟಿದ್ದೇವೆ. ಈ ಊರಿಗೂ ನಮಗೂ ಒಂದು ಋಣಾನುಬಂಧವಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಉಳಿಸಲು ರಾಜ್ಯದಲ್ಲೇ ಮಾದರಿ ಶಾಲೆಯನ್ನಾಗಿ ಮಾಡಲು ನಾನು ಮತ್ತು ಸ್ನೇಹಿತರು ಗುರಿ ಇಟ್ಟುಕೊಂಡಿದ್ದೇವೆ ಎಂದು ಬೆಂಗಳೂರಿನ ಉದ್ಯಮಿ ಹೇಮಂತ್ ತಿಳಿಸಿದರು.

ಯತ್ತಂಬಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ಮಾತನಾಡಿ, ಗ್ರಾಮದ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಿದ್ದೇವೆ. ಜಿಲ್ಲೆ ಮತ್ತು ರಾಜ್ಯದಲ್ಲೇ ಮಾದರಿಯಾಗಿ ಶಾಲೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.

ಸರ್ಕಾರಿ ಶಾಲೆ ಎಂದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ಎಂಬ ಭಾವನೆ ಇದೆ. ಇದನ್ನೆಲ್ಲಾ ಹೊರತುಪಡಿಸಿ ಈ ಶಾಲೆ ನಮ್ಮ ಶಾಲೆ, ನಮ್ಮೆಲ್ಲರ ಶಾಲೆ ಎಂಬ ಗೌರವ ನಮ್ಮಲ್ಲಿ ಬೆಳೆಯಬೇಕು. ಜಯರಾಮು ಮೂಲಕ ನಾವು ಈ ಊರಿಗೆ ಕಾಲಿಟ್ಟಿದ್ದೇವೆ. ಈ ಊರಿಗೂ ನಮಗೂ ಒಂದು ಋಣಾನುಬಂಧವಿದೆ ಎಂದರು.

ಹಳ್ಳಿಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ. ಆದರೆ, ನಮ್ಮೂರಿನ ಶಾಲೆಯಿಂದಾಗಿ ನಮಗೊಂದು ಸ್ಥಾನ ಸಿಕ್ಕಿದೆ. ಈ ಶಾಲೆ ಅತ್ಯುನ್ನತ ಮಟ್ಟಕ್ಕೆ ತಲುಪಬೇಕಾದರೆ ಏನೇನು ಅಗತ್ಯವಿದೆ ಅದನ್ನೆಲ್ಲ ನಾವು ಪೂರೈಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.

ದೂರದ ಬೆಟ್ಟ ನುಣ್ಣಗೆ ಎಂಬ ಗಾಧೆ ನಿಜವಾಗಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಹಳ್ಳಿ ಶಾಲೆ ಬಿಟ್ಟು ಪಟ್ಟಣದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಹಳ್ಳಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸೋಣ ಎಂದು ಮನವಿ ಮಾಡಿದರು.

ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಶಾಲೆ ಮೈದಾನದಲ್ಲಿ ನಿರ್ಮಿಸಲ್ಪಟ್ಟ ಧಾನ್ಯಗಳ ಒಕ್ಕಣೆಯ ಕಣ, ಹೂವಿನಿಂದ ಅಲಂಕರಿಸಿದ ಧಾನ್ಯಗಳ ರಾಶಿ, ರಟ್ಟಿನಲ್ಲಿ ನಿರ್ಮಿಸಲಾದ ಹಳ್ಳಿಮನೆ, ನೀರು ಸೇದುವ ಬಾವಿ, ಎತ್ತಿನ ಬಂಡಿ ,ಒಣ ಹುಲ್ಲಿನ ಮೆದೆ, ಮೊರಗಳಲ್ಲಿ ತುಂಬಿಟ್ಟ ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಹೆಂಗಸು ಮತ್ತುಗಂಡಸಿನ ಚಿತ್ರವನ್ನು ಬಿಡಿಸಿರುವ ಮಡಿಕೆಗಳು, ಪಕ್ಷಿಗಳಿಂದ ಧಾನ್ಯವನ್ನು ಸಂರಕ್ಷಿಸಲು ಹೊಲಗಳಲ್ಲಿರಿಸುವ ಬೆದರು ಬೊಂಬೆಗಳು,ಎಳ್ಳು ಬೆಲ್ಲ ಕೊಬ್ಬರಿ ಮಿಶ್ರಣ, ಪೂಜಾ ಸಾಮಗ್ರಿಗಳು ಒಟ್ಟಾರೆ ಶಾಲೆ ಆವರಣ ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತಿತ್ತು.

ಇದೇ ವೇಳೆ ಗ್ರಾಪಂ ಅಧ್ಯಕ್ಷರಾದ ಭಾಗ್ಯಮ್ಮ, ಪುಟ್ಟಸ್ವಾಮಾಚಾರಿ, ಸಿಆರ್ ಪಿ ಶಿಕ್ಷಕ ರೇವಣ್ಣ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಜಯರಾಮು, ಶಿವಕುಮಾರ್, ವೀರಣ್ಣ, ಹೇಮಂತ್ ಮತ್ತು ಇತರರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ, ಎಸ್ ಡಿಎಮಸಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಸೋಮಶೇಖರ್, ಶಿವಲಿಂಗೇಗೌಡ, ಕೆಂಚೇಗೌಡ, ಕೆಂಪೇಗೌಡ, ಕೆಂಪರಾಜು ಸೇರಿದಂತೆ ಶಿಕ್ಷಕ ವೃಂದ, ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು