- ಪೋಸ್ಟರ್ ಬಿಡುಗಡೆಗೊಳಿಸಿ ಪ್ರತಿಭಟನೆ । ಕೇಂದ್ರದ ಕಾರ್ಮಿಕ ವಿರೋಧಿ, ಏಕಸ್ವಾಮ್ಯ ಬಂಡವಾಳಶಾಹಿ ಪರ ನೀತಿಗೆ ಖಂಡನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಮತ್ತು ಏಕಸ್ವಾಮ್ಯ ಬಂಡವಾಳಶಾಹಿ ಪರವಾದ ನೀತಿಗಳ ವಿರುದ್ಧ ಎಐಯುಟಿಯುಸಿ ಸಂಘಟನೆ ಸೆ.4ರಂದು ನವದೆಹಲಿಯಲ್ಲಿ ಅಖಿಲ ಭಾರತ ಕಾರ್ಮಿಕರ ಹೋರಾಟ ಹಮ್ಮಿಕೊಂಡಿದ್ದು, ಈ ಹಿನ್ನೆಲೆ ನಗರದಲ್ಲಿ ಹೋರಾಟದ ಪೋಸ್ಟರ್ ಬಿಡುಗಡೆಗೊಳಿಸಿ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆ ಮುಖಂಡರು ದೆಹಲಿ ಹೋರಾಟದ ಪೋಸ್ಟರ್ ಬಿಡುಗಡೆ ಮಾಡುವ ಜೊತೆಗೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಧೋರಣೆ, ಕಾನೂನುಗಳು ಹಾಗೂ ಬಂಡವಾಳಶಾಹಿ ಪರ ನೀತಿಗಳ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ ಮಾತನಾಡಿ, ಕಾರ್ಮಿಕರ ಹಕ್ಕುಗಳನ್ನು ಕಸಿಯುವ 4 ಕಾರ್ಮಿಕ ಮಸೂದೆಗಳನ್ನು ತಕ್ಷಣವೇ ರದ್ದುಪಡಿಸಬೇಕು. ಸಾರ್ವಜನಿಕ ವಲಯ ಮತ್ತು ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ರಾಷ್ಟ್ರೀಯ ಆದಾಯ ನಗದೀಕರಣ ಪೈಪ್ ಲೈನ್ ರದ್ದುಪಡಿಸಬೇಕು. ವಿದ್ಯುತ್ (ತಿದ್ದುಪಡಿ) ಮಸೂದೆ 20243 ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ರದ್ದುಪಡಿಸಲು ಒತ್ತಾಯಿಸಿದರು.ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ಮೀರಬಾರದು. ಕಾಯಂ ನೌಕರರ ಸಂಖ್ಯೆ ಕಡಿತ ನಿಲ್ಲಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಏಕೀಕೃತ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಬೇಷರತ್ತಾಗಿ ಎಲ್ಲರಿಗೂ ಜಾರಿಗೊಳಿಸಬೇಕು. ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳಿಗೆ ಅರ್ಹ ವೇತನ ಮಿತಿ ತೆಗೆದು ಹಾಕಿ, ಎಲ್ಲ ಕಾರ್ಮಿಕರಿಗೂ ಈ ಸಾಮಾಜಿಕ ಭದ್ರತೆ ಸೌಲಭ್ಯ ಖಾತ್ರಿಪಡಿಸಬೇಕು. ಸ್ಕೀಂ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅಂತಹವರಿಗೆ ಎಲ್ಲ ಶಾಸನಬದ್ಧ ಸೌಲಭ್ಯ ಒದಗಿಸಬೇಕು ಎಂದು ತಾಕೀತು ಮಾಡಿದರು.
ವಲಸೆ ಕಾರ್ಮಿಕರಿಗೆ ಸುರಕ್ಷತೆ, ಭದ್ರತೆ ಮತ್ತು ಶಾಶ್ವತ ಉದ್ಯೋಗ ಒದಗಿಸಬೇಕು. ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿ ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು. ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿ, ಕಾರ್ಮಿಕ ಕಾನೂನು ಸೌಲಭ್ಯ ನೀಡಬೇಕು. ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ಅಥವಾ ನಿರುದ್ಯೋಗ ಭತ್ಯೆ ಒದಗಿಸಿ, ಕೆಲಸದ ಹಕ್ಕನ್ನು ಸಾಂವಿಧಾನಿಕ ಹಕ್ಕಾಗಿ ಘೋಷಿಸಬೇಕು. ಕಾರ್ಮಿಕ ಸಂಘಗಳ ಹಕ್ಕುಗಳು ಮತ್ತು ಪ್ರಜಾತಂತ್ರದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ಶಿವಾಜಿ ರಾವ್, ತಿಪ್ಪೇಸ್ವಾಮಿ ಅಣಬೇರು, ಎಲ್.ಎಚ್.ಪ್ರಕಾಶ, ಪರಮೇಶ್ವರಪ್ಪ, ಲಲಿತಮ್ಮ ನರಗನಹಳ್ಳಿ, ಎಸ್.ಆರ್.ಇಂದಿರಾ, ವಿರೂಪಾಕ್ಷಪ್ಪ, ರವಿ, ಬಸವರಾಜ, ಅಕ್ಕಮ್ಮ ಇತರರು ಇದ್ದರು.
- - -(ಬಾಕ್ಸ್) ಬೇಡಿಕೆಗಳೇನೇನು? - ಆಹಾರ, ಔಷಧಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಿಸಬೇಕು.
- ರೈತ ವಿರೋಧಿ ''''''''ರಾಷ್ಟ್ರೀಯ ಕೃಷಿ ಮಾರುಕಟ್ಟೆ ಚೌಕಟ್ಟು'''''''' ರದ್ದುಗೊಳಿಸಿ 02+50 ಸೂತ್ರದಂತೆ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತರಬೇಕು.- ರಾಷ್ಟ್ರೀಯ ಶಿಕ್ಷಣ ನೀತಿ-2020 ರದ್ದುಗೊಳಿಸಬೇಕು.
- ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ, ಅಶ್ಲೀಲತೆಯ ಪ್ರಚಾರ, ಡ್ರಗ್ಸ್ ಇತ್ಯಾದಿ ಮಾದಕ ಪದಾರ್ಥಗಳನ್ನು ನಿಷೇಧಿಸಬೇಕು.- ದುಡಿಯುವ ಜನರ ಜೀವನ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಇತರ ನ್ಯಾಯಯುತ ಬೇಡಿಕೆ ಈಡೇರಿಸಬೇಕು.
- - --30ಕೆಡಿವಿಜಿ1, 2:
ದೆಹಲಿಯಲ್ಲಿ ಸೆ.4ರಂದು ಕೇಂದ್ರದ ವಿರುದ್ಧ ಹಮ್ಮಿಕೊಂಡ ಹೋರಾಟದ ಹಿನ್ನೆಲೆ ದಾವಣಗೆರೆಯಲ್ಲಿ ಶನಿವಾರ ಎಐಯುಟಿಯುಸಿ ಸಂಘಟನೆಯಿಂದ ಪೋಸ್ಟರ್ ಬಿಡುಗಡೆ ಮಾಡಿ ಪ್ರತಿಭಟಿಸಲಾಯಿತು.