)
ಕಾರ್ಕಳ: ಅಜೆಕಾರು ಠಾಣಾ ವ್ಯಾಪ್ತಿಯ ಮರ್ಣೆ ಗ್ರಾಮದ ಕೈಕಂಬ ಬಸದಿ ಪ್ರದೇಶದಲ್ಲಿ ತಾಯಿ-ಮಗಳ ದಾರುಣ ಸಾವಿನ ಘಟನೆ ಭಾನುವಾರ ಸಂಭವಿಸಿದೆ.ಕುರುಂಬಿಲು (63) ಹಾಗೂ ಅವರ ಮಗಳು ವಸಂತಿ (30) ಮೃತರು. ಅವರು ಮರ್ಣೆ ಗ್ರಾಮದ ಕೈಕಂಬ ಬಸದಿ ಐದು ಸೆಂಟ್ಸ್ ಎಂಬಲ್ಲಿ ವಾಸವಾಗಿದ್ದರು.
ಶನಿವಾರ ಕುರುಂಬಿಲು ಅವರು ಎಂದಿನಂತೆ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಮರಳಿದ್ದರು. ಭಾನುವಾರ ಬೆಳಗ್ಗೆ ಸುಮಾರು 8ಗಂಟೆಗೆ ಕುರುಂಬಿಲು ಅವರು ಮನೆಯ ಹಾಲ್ ಪಕ್ಕದ ಕೊಠಡಿಯಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಅಲ್ಲದೆ, ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ವಸಂತಿ ಅವರು ಮಾತನಾಡದೇ ಇದ್ದು, ಪರಿಶೀಲನೆ ವೇಳೆ ಅವರು ಕೂಡ ಮೃತಪಟ್ಟಿರುವುದು ದೃಢಪಟ್ಟಿದೆ.
ವಸಂತಿ ಅವರು ರೋಗ ಉಲ್ಬಣದಿಂದ ಮೃತಪಟ್ಟಿರಬಹುದು ಹಾಗೂ ಮಗಳ ಮರಣದ ಆಘಾತದಿಂದ ಕುರುಂಬಿಲು ಶನಿವಾರ ಸಂಜೆ ಯಿಂದ ಭಾನುವಾರ ಮುಂಜಾನೆ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.