ಅಖಿಲ ಹವ್ಯಕ ಮಹಾಸಭೆ 81ನೇ ಸಂಸ್ಥಾಪನೋತ್ಸವ ಅದ್ಧೂರಿ

KannadaprabhaNewsNetwork |  
Published : Apr 02, 2024, 02:23 AM ISTUpdated : Apr 02, 2024, 07:04 AM IST
ಅಖಿಲ ಹವ್ಯಕ ಮಹಾಸಭೆಯ 81ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಅಖಿಲ ಹವ್ಯಕ ಮಹಾಸಭೆಯ 81ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಹವ್ಯಕ ಭವನದಲ್ಲಿ ಭಾನುವಾರ ಜರುಗಿತು.

 ಬೆಂಗಳೂರು:  ಅಖಿಲ ಹವ್ಯಕ ಮಹಾಸಭೆಯ 81ನೇ ವರ್ಷದ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಹವ್ಯಕ ಭವನದಲ್ಲಿ ಭಾನುವಾರ ಜರುಗಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹವ್ಯಕ ಸಮಾಜದ ಎಂಟು ಸಾಧಕರಿಗೆ ಸನ್ಮಾನ ಮಾಡಿ ಮಾತನಾಡಿದ ಹಿರಿಯ ವಿದ್ವಾಂಸ, ಭಾಷಾಶಾಸ್ತ್ರಜ್ಞ ಡಾ. ಪಾದೇಕಲ್ಲು ವಿಷ್ಣುಭಟ್, ವೈಯಕ್ತಿಕ ಸಾಧನೆಯ ಅನುಭವಗಳನ್ನು ದಾಖಲಿಸುವ ಜೊತೆಗೆ ಜ್ಞಾನವನ್ನು ಹಂಚುವುದರ ಮೂಲಕ ಸಮಾಜಕ್ಕೆ ನಾವು ಉಪಕಾರಿಯಾಗಬೇಕು. ಹವ್ಯಕ ಸಮಾಜದ ಸಾಧಕರನ್ನು ಸನ್ಮಾನಿಸಿ, ಗೌರವಿಸಿ ಸಮಾಜಕ್ಕೆ ಪರಿಚಯಿಸುವುದರಿಂದ ಇನ್ನಷ್ಟು ಸಾಧನೆಗಳಿಗೆ ಪ್ರೇರಣೆಯಾಗಲಿದೆ. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ನಾವೆಲ್ಲ ಮಹಾಸಭೆಯ ಜೊತೆಯಾಗೋಣ ಎಂದರು.

ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಈ ವರ್ಷ ಡಿಸೆಂಬರ್ 27, 28, 29 ರಂದು 3ನೇ ವಿಶ್ವಹವ್ಯಕ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಪೂರ್ವಭಾವಿಯಾಗಿ ಹತ್ತಾರು ಸಮಾವೇಶಗಳು ನಡೆಯಲಿದ್ದು, ಇದು ಎಲ್ಲಾ ಸಮಾಜದವರಿಗೂ ಮುಕ್ತವಾಗಿರಲಿದೆ. ಇದು ಜಾತಿಯ ಸಮಾವೇಶ ಆಗದೇ, ಹವ್ಯಕ ಸಮಾಜವನ್ನು ಸಮಷ್ಟಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ನಡೆಯಲಿದೆ ಎಂದರು.

ಸಿಐಡಿ ಪೋಲೀಸ್ ಅಧೀಕ್ಷಕ ರಾಘವೇಂದ್ರ ಹೆಗಡೆ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ, ಮಹಾಸಭೆ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು:

ಹವ್ಯಕ ವಿಭೂಷಣ ಪ್ರಶಸ್ತಿಗೆ ಸಾಹಿತ್ಯ ವಿಭಾಗದಿಂದ ಹೆಚ್. ಎಂ. ತಿಮ್ಮಪ್ಪ ಕಲಸಿ, ಹವ್ಯಕ ಭೂಷಣ ಪ್ರಶಸ್ತಿಗೆ ಶಿಲ್ಪಶಾಸ್ತ್ರ ವಿಭಾಗದಿಂದ ಗಣೇಶ್ ಎಲ್. ಭಟ್, ಪರಿಸರ ವಿಭಾಗದಲ್ಲಿ ಶಿವಾನಂದ ಕಳವೆ, ಯೋಗ ವಿಭಾಗದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಹವ್ಯಕ ಶ್ರೀ ಪ್ರಶಸ್ತಿಗೆ ಛಾಯಾಗ್ರಹಣ ವಿಭಾಗದಿಂದ ಗಿರಿಧರ್ ದಿವಾನ್, ಸಂಗೀತ ವಿಭಾಗದಲ್ಲಿ ಗಣೇಶ್ ದೇಸಾಯಿ ಮತ್ತು ಕಥಾಕೀರ್ತನಕಾರರಾದ ಮಂಗಳ ಬಾಲಚಂದ್ರ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಗೆ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಅವರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ನೀಡಲಾಯಿತು.

PREV