ಕನ್ನಡಪ್ರಭ ವಾರ್ತೆ ಮೈಸೂರು
ಹಾವುಗಳ ಬಗ್ಗೆ ಅನಗತ್ಯ ಭಯದಿಂದ ಅವುಗಳನ್ನು ಸಾಯಿಸಲಾಗುತ್ತಿದೆ. ಎಲ್ಲಾ ಹಾವುಗಳು ವಿಷಕಾರಿಯಲ್ಲ ಎಂದು ಉರಗ ರಕ್ಷಕ ಸ್ನೇಕ್ ಶ್ಯಾಮ್ ತಿಳಿಸಿದರು.ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಬುಧವಾರ ಆಯೋಜಿಸಿದ್ದ ವಿಶ್ವ ಹಾವುಗಳ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಗರಹಾವು, ಕಾಳಿಂಗ ಸರ್ಪ ವಿಷಕಾರಿಯಾಗಿದ್ದು, ಹಪ್ಪಟೆ, ಕೇರೆ ಹಾವು, ಹಸಿರು ಹಾವು ಮುಂತಾದವು ವಿಷಕಾರಿಯಲ್ಲ. ಕೆಲವು ಹಾವುಗಳು ಹೆಚ್ಚು ವಿಷಕಾರಿಯಲ್ಲದಿದ್ದರೂ, ಹಪ್ಪಟೆ ಹಾವು ಕಚ್ಚಿದರೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಹಾವುಗಳ ಬಗ್ಗೆ ಅನಗತ್ಯ ಭಯ ಬೇಡ ಎಂದು ಸಲಹೆ ನೀಡಿದರು.
ಹಾವು ಕಚ್ಚಿದಾಗ ಬಹುತೇಕ ಜನರು ಭಯದಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಹಾವು ಕಚ್ಚಿದಾಗ ವ್ಯಕ್ತಿಗೆ ಧೈರ್ಯ ತುಂಬಬೇಕು ಮತ್ತು ಸಾಧ್ಯವಾದಷ್ಟು ಬೇಗ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಅವರು ಕಿವಿಮಾತು ಹೇಳಿದರು.ಹಿರಿಯ ಸಮಾಜಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ಹಾವನ್ನ ನಾವು ಜೀವಭಯದಿಂದ ಹಿಡಿಯಬಾರದು. ವೈಜ್ಞಾನಿಕವಾಗಿ ಜೀವ ರಕ್ಷಣೆಯಿಂದ ಹಿಡಿಯಬೇಕು. ಹಬ್ಬ ಹರಿದಿನ ಇತಿಹಾಸದಲ್ಲೂ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಸಹ ನಮ್ಮ ಪೂರ್ವಜರು ಪೂಜ್ಯ ಸ್ಥಾನ ನೀಡಿದ್ದಾರೆ. ಮಕ್ಕಳು ಸಣ್ಣ ವಯಸ್ಸಿನಲ್ಲೇ ಪರಿಸರ ಸಂರಕ್ಷಣೆ ಕಾಳಜಿ ಬೆಳೆಸಿಕೊಳ್ಳವಲ್ಲಿ ಮುಂದಾಗಬೇಕು ಎಂದರು.
ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಶಾಲೆಯ ಮುಖ್ಯ ಶಿಕ್ಷಕಿ ಸುಗುಣಾವತಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ಜಿ. ರಾಘವೇಂದ್ರ, ಎಸ್.ಎನ್. ರಾಜೇಶ್, ಶ್ರೀನಿವಾಸ್, ಪ್ರವೀಣ್ ಕುಮಾರ್ ಮೊದಲಾದವರು ಇದ್ದರು.