ಧಾರವಾಡ: ವ್ಯಸನದಿಂದ ಹೊರಬರಲು ಸಾಧ್ಯವೇ ಇಲ್ಲ ಎಂದು ಹೇಳುವವರೇ ಅಧಿಕ. ಆದರೆ, ಸೂಕ್ತ ಮಾರ್ಗದರ್ಶನ, ಕುಟುಂಬದ ಸದಸ್ಯರ ಸಹಕಾರ ಹಾಗೂ ಸಂಕಲ್ಪ ಶಕ್ತಿಯಿಂದ ಯಾವುದೇ ವ್ಯಸನದಿಂದಾದರೂ ಹೊರಬಂದು ನವಜೀವನ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ತಜ್ಞ ಡಾ. ಪ್ರಕಾಶ ಭಟ್ ಹೇಳಿದರು.
ಇಲ್ಲಿಯ ರಾಯಾಪುರದ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ 2000ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ವ್ಯಸನದ ಕಾರಣದಿಂದ ಕಳೆದುಹೋದ ಗೌರವ, ಸಮ್ಮಾನ, ಹಣ, ಆತ್ಮಸ್ಥೈರ್ಯ, ದೈಹಿಕ ಸಾಮರ್ಥ್ಯವನ್ನು ಮರಳಿ ಪಡೆಯಬೇಕೆಂಬ ಸದುದ್ದೇಶದಿಂದ ಮದ್ಯರ್ವಜನ ಶಿಬಿರ ಆಯೋಜಿಸಲಾಗಿದ್ದು, ಶಿಬಿರಾರ್ಥಿಗಳು ಸನ್ಮಾರ್ಗದಲ್ಲಿ ಸಾಗುವಂತಾಗಬೇಕು. ಕುಟುಂಬದಲ್ಲಿ ಮತ್ತೆ ನೆಮ್ಮದಿ ಪಡೆಯಲು ಸನ್ನದ್ಧರಾಗುವುದು ಅವಶ್ಯಕ. ನಮ್ಮ ಮೇಲೆ ಅವಲಂಬಿತರಾಗಿರುವ ಕುಟುಂಬದ ಸದಸ್ಯರಿಗಾಗಿ ನಾವು ದುಶ್ಚಟಗಳಿಂದ ದೂರವಾಗಬೇಕು. ಡಾ. ಡಿ. ವೀರೇಂದ್ರ ಹೆಗ್ಗಡೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಶಿಬಿರದ ಉದ್ದೇಶ ಅರ್ಥ ಮಾಡಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಮದ್ಯಪಾನ ನಿಷೇಧಿಸಲು ಮುಂದಾಗುತ್ತಿಲ್ಲ. ಮದ್ಯಪಾನ ಹಾಗೂ ಆನ್‌ಲೈನ್ ಬೆಟ್ಟಿಂಗ್ ವ್ಯಸನದಿಂದಾಗಿ ನಗರ ಹಾಗೂ ಹಳ್ಳಿಗಳಲ್ಲಿ ಸಹಸ್ರಾರು ಜನರು ಜೀವನ ಹಾಳು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ವ್ಯಸನಗಳಿಂದ ಮುಕ್ತರಾಗುವುದು ಅಗತ್ಯ ಎಂದರು.ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಬಸವರಾಜ ಹೊಂಗಲ್ ಮಾತನಾಡಿ, ವ್ಯಸನದಿಂದ ಮುಕ್ತರಾಗಿ ಪರಿವರ್ತನೆಗೊಂಡು ಸಮಾಜದಲ್ಲಿ ಗೌರವ ಪಡೆದುಕೊಳ್ಳಬೇಕು. ಯಾರೂ ಕೆಟ್ಟವರಲ್ಲ, ಆದರೆ ಗೆಳೆತನದ ಕಾರಣದಿಂದಾಗಿ ಅಂಟಿಕೊಳ್ಳುವ ಕುಡಿತದ ಚಟ ಮುಂದೆ ನಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಶಿಬಿರದಿಂದ ಹೊಸ ಜೀವನ ಪಡೆದುಕೊಳ್ಳುವುದು ಮುಖ್ಯ ಎಂದರು.
ವಿದ್ಯಾಗಿರಿ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ ಹೊಸೂರ, ನಟರಾಜ ಬಾದಾಮಿ ಮಾತನಾಡಿದರು. ವಸಂತ ಅರ್ಕಾಚಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪ್ರದೀಪ ಶೆಟ್ಟಿ, ಪ್ರಭಾಕರ ನಾಯಕ, ಪೀರಾಜಿ ಖಂಡೇಕರ, ಮಾರುತಿ ಶೇಟ್ ಇದ್ದರು.