ಶಿವಕುಮಾರ ಕುಷ್ಟಗಿ
ಸಣ್ಣ ನೀರಾವರಿ ಕೆರೆಗಳ ಹಿನ್ನೀರನ್ನೇ ನಂಬಿಕೊಂಡು ಜಿಲ್ಲೆಯಲ್ಲಿ ಒಟ್ಟು 7741 ಹೆ. ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿತ್ತು. ಆದರೆ, ಪ್ರಸ್ತುತ ಕೆರೆಗಳಲ್ಲಿ ನೀರಿನ ಹನಿಯೂ ಇಲ್ಲದಿರುವುದರಿಂದ ಈ ಬಾರಿ ಕೃಷಿಕರಿಗೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಮತ್ತು ತೀವ್ರ ಹಾನಿ ತೋಟಗಾರಿಕಾ ಬೆಳೆಗಳ ಮೇಲೆ ಉಂಟಾಗುತ್ತಿದ್ದು, ದಾಳಿಂಬೆ, ಪಪ್ಪಾಯಿ, ಮಾವು ಮತ್ತು ತರಕಾರಿ ಬೆಳೆದ ರೈತರು ಕೊಳವೆ ಬಾವಿಗಳಲ್ಲೂ ನೀರಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಈ ಜಲಕ್ಷಾಮದ ಬಿಸಿ ತಟ್ಟಿದ್ದು, ಸಣ್ಣ ನೀರಾವರಿ ಇಲಾಖೆಯಡಿ ಮುಂಡರಗಿ ತಾಲೂಕಿನಲ್ಲಿ 11, ಗಜೇಂದ್ರಗಡ 8, ಶಿರಹಟ್ಟಿ 5, ಗದಗ 4, ಲಕ್ಷ್ಮೇಶ್ವರ 3 ಹಾಗೂ ರೋಣ ತಾಲೂಕಿನಲ್ಲಿ 1 ಕೆರೆ ಸೇರಿ ಒಟ್ಟು 32 ಕೆರೆಗಳಿವೆ. ನರಗುಂದ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಯಾವುದೇ ಕೆರೆಗಳೇ ಇಲ್ಲದಿರುವುದು ಗಮನಾರ್ಹ.ನೀರಿನ ಸಂಗ್ರಹ: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿನ ಎಲ್ಲ 32 ಕೆರೆಗಳು ಸೇರಿ ಪ್ರಸ್ತುತ ಲಭ್ಯವಿರುವ ಒಟ್ಟು ನೀರಿನ ಸಂಗ್ರಹ ಮಟ್ಟ ಕೇವಲ 1385 ಎಂಸಿಎಫ್ಟಿ (ಮಿಲಿಯನ್ ಕ್ಯುಬಿಕ್ ಫೀಟ್) ಮಾತ್ರವಿದೆ. ಜಿಲ್ಲೆಯಲ್ಲಿ ಶೇ. 90ಕ್ಕಿಂತ ಹೆಚ್ಚು, ಭರ್ತಿಯಾಗದೇ ಇರುವ ಕೆರೆಗಳೇ ಬರ ಸ್ಥಿತಿಯ ತೀವ್ರತೆಗೆ ಉತ್ತಮ ಸಾಕ್ಷಿಯಾಗಿದೆ.
ಅಂತರ್ಜಲ ಕುಸಿತ: ಕೆರೆಗಳು ಬಟಾ ಬಯಲಾದ ಪರಿಣಾಮ ಜಿಲ್ಲಾದ್ಯಂತ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗೆ ಸಾಕಾಗುತ್ತಿಲ್ಲ. ಕೇವಲ ಕೃಷಿಯಷ್ಟೇ ಅಲ್ಲದೆ, ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಮಳೆಯ ಅಭಾವದಿಂದಾಗಿ ವಾಣಿಜ್ಯ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳು ಸಂಪೂರ್ಣ ಒಣಗಿವೆ.
ಪೂರ್ಣ ಭರ್ತಿಯಾದ ಕೆರೆಗಳು - 00
ಶೇ. 30-50 ನೀರಿರುವ ಕೆರೆಗಳು - 12