ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ಸಕಲ ವ್ಯವಸ್ಥೆ

KannadaprabhaNewsNetwork |  
Published : Nov 22, 2025, 03:15 AM IST
ಡಿ 4 ರಿಂದ ನಡೆಯುವ ಗೊಡಚಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ಡಿ.4 ರಿಂದ 5 ದಿನಗಳವರೆಗೆ ನಡೆಯುವ ಗೊಡಚಿ ವೀರಭದ್ರೇಶ್ವರ ಜಾತ್ರೆ ಸಮಯದಲ್ಲಿ ಯಾತ್ರಿಕರಿಗೆ ಶುದ್ಧ ಕುಡಿಯವ ನೀರು, ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಠಿಯಿಂದ ಸೂಕ್ತ ವ್ಯವಸ್ಥೆ ಮಾಡಬೇಕೆಂದು ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಡಿ.4 ರಿಂದ 5 ದಿನಗಳವರೆಗೆ ನಡೆಯುವ ಗೊಡಚಿ ವೀರಭದ್ರೇಶ್ವರ ಜಾತ್ರೆ ಸಮಯದಲ್ಲಿ ಯಾತ್ರಿಕರಿಗೆ ಶುದ್ಧ ಕುಡಿಯವ ನೀರು, ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಠಿಯಿಂದ ಸೂಕ್ತ ವ್ಯವಸ್ಥೆ ಮಾಡಬೇಕೆಂದು ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ ಸೂಚಿಸಿದರು.

ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ಗೊಡಚಿ ವೀರಭದ್ರೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಾಗಿದ್ದು, ಜಾತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಪೊಲೀಸ್, ಆರೋಗ್ಯ ಮತ್ತು ಗ್ರಾಮ ಪಂಚಾಯತಿಯಿಂದ ಎಚ್ಚರಿಕೆ ವಹಿಸಬೇಕು. ರಾಮದುರ್ಗದ ನೆರೆಯ ತಾಲೂಕುಗಳಿಂದ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಹೇಳಿದರು.

ಜಾತ್ರೆಗೆ ಆಗಮಿಸುವ ಭಕ್ತಾಧಿಗಳ ಆರೋಗ್ಯದ ದೃಷ್ಠಿಯಿಂದ ತುರ್ತು ಚಿಕಿತ್ಸೆಗೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿದ್ದು, ಗೊಡಚಿ ಕ್ಷೇತ್ರಕ್ಕೆ ಮೂರು ಪ್ರಮುಖ ಮಾರ್ಗಗಳ ಸಂಪರ್ಕವಿದೆ. ಮೂರು ಮಾರ್ಗಗಳಿಗೆ ತುರ್ತು ಆರೋಗ್ಯ ವಾಹನ ವ್ಯವಸ್ಥೆ ಮಾಡಲಾಗಿದೆ. 24 ಗಂಟೆ ಆರೋಗ್ಯ ಸೇವೆಗೆ ವೈದ್ಯರನ್ನು ಡಿ.3ರಿಂದ ಜಾತ್ರೆ ಮುಕ್ತಾಯದ ಅವಧಿಯಲ್ಲಿ ನಿಯೋಜನೆ ಮಾಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನವೀನ ನಿಜಗುಲಿ ತಿಳಿಸಿದರು.

ಜಾತ್ರೆ ಸಮಯದಲ್ಲಿ ಜನರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸರ ನಿಯೋಜನೆ ಮಾಡಲಾಗುವುದು. ಈ ಬಾರಿ ಕಟಕೋಳ ಮತ್ತು ರಾಮದುರ್ಗ ರಸ್ತೆ ಎರಡು ಸ್ಥಳಗಳಲ್ಲಿ ಪೊಲೀಸ್ ಸಹಾಯವಾಣಿ ತೆರೆಯಲಾಗುವುದು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಡಿವೈಎಸ್ಪಿ ಚಿದಂಬರ ಮಡಿವಾಳರ ವಿವರಿಸಿದರು.

ಅಂಗಡಿ ಮತ್ತು ಮನರಂಜನೆ ಸೇರಿ ಪ್ರಮುಖ ಕಾರ್ಯಗಳಿಗೆ ವಿದ್ಯುತ್ ಅಡಚಣೆಯಾಗದಂತೆ ಕಟಕೋಳ ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಿಂದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಾತ್ರೆಯೊಳಗಾಗಿ ಬನ್ನೂರ ವಿತರಣಾ ಕೇಂದ್ರ ಉದ್ಘಾಟನೆಯಾಗಲಿದ್ದು, ಪರಿಣಾಮ ಜಾತ್ರೆಗೆ ಯಾವುದೇ ವಿದ್ಯುತ್ ವ್ಯತ್ಯಯ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿ ತಿಳಿಸಿದರು.

ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆಗೆ ಗ್ರಾಪಂಯಿಂದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಜಾತ್ರೆ ವ್ಯವಸ್ಥಿತವಾಗಿ ನಡೆಯಲು ಎಲ್ಲ ರೀತಿಯ ಸಹಕಾರ ನೀಡಲು ಸಿದ್ದ ಎಂದು ಗ್ರಾಪಂ ಅಧ್ಯಕ್ಷೆ ಲಕ್ಕವ್ವ ವಗ್ಗರ ತಿಳಿಸಿದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನದ ತಾಲೂಕಾ ಅಧ್ಯಕ್ಷ ಜಿ.ಬಿ.ರಂಗನಗೌಡ್ರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ಸಿಎಸ್‌ಆರ್ ₹200 ಕೋಟಿ ಅನುದಾನಡಿ 211 ಕೊಠಡಿ ನಿರ್ಮಾಣ
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿ: ಚಿತ್ರಾಪುರ