ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಕೋವಿಡ್ ಸಂದರ್ಭದಲ್ಲಿ ಅಕ್ಸಿಜನ್ ಕೊರತೆಯಿಂದ ಮೃತಪಟ್ಟ ೩೬ ಮಂದಿ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ದೊರೆಯಬೇಕು. ಈ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ಮಾಡುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮುರ್ತಿ ತಿಳಿಸಿದರು.ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು ನಗರದ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ವೇಳೆ ಮಾತನಾಡಿದರು. ಸಂಸದ ರಾಹುಲ್‌ಗಾಂಧಿ ಒತ್ತಾಸೆ ಹಾಗೂ ಅವರ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ವಿಚಾರವನ್ನು ಮಂಡಿಸಿ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗುಂಡ್ಲುಪೇಟೆ ಬಳಿ ಕೋವಿಡ್ ಅಕ್ಸಿಜನ್ ದುರಂತದಲ್ಲಿ ಮೃತ ಪಟ್ಟ ೩೬ ಮಂದಿ ಸಂತ್ರಸ್ತ ಕುಟುಂಬಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಅವರೊಂದಿಗೆ ನಡೆಸಿ ಸಂವಾದ ಹಾಗೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮೆಲರಿಗೂ ಒಳ್ಳೆಯದಾಗುತ್ತದೆ ಎಂದು ಅವರು ಹೇಳಿದ್ದರು. ಅವರು ಸರ್ಕಾರ ರಚನೆಯಾದ ಬಳಿಕ ಈ ಬಗ್ಗೆ ರಾಜ್ಯ ವರಿಷ್ಠರಿಗೆ ಸೂಚನೆ ನೀಡಿ, ಈ ಬೇಡಿಕೆಯನ್ನು ಈಡೇರಿಸುವಂತೆ ಸೂಚನೆ ಕೊಟ್ಟ ಫಲವಾಗಿ ನಿಮ್ಮೆಲ್ಲರಿಗೂ ಒಳ್ಳೆಯದಾಗಿದೆ ಎಂದರು.ನಾನು ಶಾಸಕನಾಗಿ ನನ್ನ ಕರ್ತವ್ಯ ಮಾಡಿದ್ದೇವೆ. ಆ ಸಂದರ್ಭದಲ್ಲಿ ನಮ್ಮ ಪಕ್ಷವು ನಿಮ್ಮೊಂದಿಗೆ ನಿಂತು ಹೋರಾಟ ಮಾಡಿತ್ತು. ಈಗ ಸರ್ಕಾರ ನಮ್ಮದಾಗಿದೆ. ಸರ್ಕಾರಕ್ಕೆ ಆರೋಗ್ಯ ಇಲಾಖೆ ನೀಡಿರುವ ವರದಿಯನ್ವಯ ೨೧ ಮಂದಿಗೆ ಸರ್ಕಾರಿ ಉದ್ಯೋಗ ದೊರೆಯುತ್ತಿದೆ. ಇನ್ನು ಉಳಿದವರಿಗೂ ಸಹ ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನ ಮಾಡೋಣ. ಜಿಲ್ಲಾಧಿಕಾರಿ ಶಿಲ್ಪನಾಗ್ ನಿಮ್ಮ ಪರವಾಗಿ ಶ್ರಮಿಸಿದ್ದಾರೆ. ಅವರೊಂದಿಗೆ ನಾನು ಸಹ ಸಮಾಲೋಚನೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೇಯದಾಗುತ್ತದೆ. ನಿಮ್ಮನ್ನು ಬೆಂಬಲಿಸಿ ಹೋರಾಟ ಮಾಡಿದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿ ಎಂದು ಕಿವಿಮಾತು ಹೇಳಿದರು.
ನಾಗರತ್ನ, ಸಿದ್ದರಾಜಮ್ಮ, ಮರಿಸ್ವಾಮಿ, ಶಿವಣ್ಣ, ನಂದಿನಿ, ಸುಶೀಲಾ, ಸವಿತಾ, ಸೇರಿದಂತೆ ಕೋವಿಡ್ ಸಂತ್ರಸ್ತ ಕುಟುಂಬದ ಸದಸ್ಯರು ಹಾಗೂ ಮುಖಂಡರು ಇದ್ದರು.