ಕಳ್ಳಭಟ್ಟಿ ಮುಕ್ತ ತಾಲೂಕಾನ್ನಾಗಿಸಲು ಎಲ್ಲ ಇಲಾಖೆಅಧಿಕಾರಿಗಳು ಪಣತೊಡಿ: ತಹಸೀಲ್ದಾರ್ ಕುಲಕರ್ಣಿ

KannadaprabhaNewsNetwork | Published : Nov 22, 2023 1:00 AM

ಸಾರಾಂಶ

ಸಾಮಾಜಿಕ ಪಿಡುಗಾಗಿರುವ ಕಳ್ಳಭಟ್ಟಿ ನಿರ್ಮೂಲನೆಗೆ ಎಲ್ಲ ಇಲಾಖೆ ಅಧಿಕಾರಿಗಳು ಅಗತ್ಯ ಸಹಕಾರ ನೀಡುವ ಮೂಲಕ ಕಳ್ಳಭಟ್ಟಿ ಮುಕ್ತ ಗಜೇಂದ್ರಗಡ ತಾಲೂಕನ್ನಾಗಿಸಲು ಪಣತೊಡಿ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಸ್ಥಳೀಯ ತಹಸೀಲ್ದಾರ್ ಕಚೇರಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಕಳ್ಳಭಟ್ಟಿ ನಿರ್ಮೂಲನೆ ತಾಲೂಕು ಸ್ಥಾಯಿ ಸಮಿತಿ ಸಭೆಯಲ್ಲಿ ಹೇಳಿದರು.

ಗಜೇಂದ್ರಗಡ: ಸಾಮಾಜಿಕ ಪಿಡುಗಾಗಿರುವ ಕಳ್ಳಭಟ್ಟಿ ನಿರ್ಮೂಲನೆಗೆ ಎಲ್ಲ ಇಲಾಖೆ ಅಧಿಕಾರಿಗಳು ಅಗತ್ಯ ಸಹಕಾರ ನೀಡುವ ಮೂಲಕ ಕಳ್ಳಭಟ್ಟಿ ಮುಕ್ತ ತಾಲೂಕನ್ನಾಗಿಸಲು ಪಣತೊಡಿ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು. ಸ್ಥಳೀಯ ತಹಸೀಲ್ದಾರ್ ಕಚೇರಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಕಳ್ಳಭಟ್ಟಿ ನಿರ್ಮೂಲನೆ ತಾಲೂಕು ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಕೆಲ ಪ್ರದೇಶಗಳಲ್ಲಿ ನಡೆಯುತ್ತಿರುವ ಕಳ್ಳಭಟ್ಟಿ ದಂಧೆ ನಿರ್ಮೂಲನೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಕಾರ, ಸಮನ್ವಯತೆ ಬೇಕಾಗುತ್ತದೆ. ಹೀಗಾಗಿ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿಗಳಾದಾಗ ಪಂಚರ ಸಾಕ್ಷಿಗೆ ಸಾರ್ವಜನಿಕರ ಬದಲಾಗಿ ಸರ್ಕಾರಿ ಅಧಿಕಾರಿಗಳನ್ನು ಸಾಕ್ಷಿ ಮಾಡುವುದರಿಂದ ನ್ಯಾಯಾಲಯದಲ್ಲಿ ಅಪರಾಧಿಗಳು ಖುಲಾಸೆ ಆಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಎ.ಬಿ. ಮಠಪತಿ ಮಾತನಾಡಿ, ಮಿತೇನಾಲ್ ರಾಸಾಯನಿಕ ಬಣ್ಣ, ನೇಲ್ ಪಾಲಿಷ್ ತಯಾರಿಕೆ ಸೇರಿದಂತೆ ಕಾರ್ಖಾನೆಗಳಲ್ಲಿ ಬಳಸುತ್ತಾರೆ. ಇದು ಮನುಷ್ಯನ ಸೇವನೆಗೆ ಅಪಾಯಕಾರಿಯಾಗಿದೆ. ಇದನ್ನು ಸಾಗಾಟ ಮಾಡುವಾಗ ಟ್ಯಾಂಕ್ ಮುಚ್ಚಳ ತೆಗೆದರೆ ಮತ್ತೆ ಮುಚ್ಚಲು ಬರದಂತ (ಓಟಿಎಲ್) ವ್ಯವಸ್ಥೆ ಇರುತ್ತದೆ. ಬೇರೆಡೆ ಇದರ ಮಾರಾಟ ಮತ್ತು ಬಳಕೆ ತಡೆಯಲು ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಮಿತೇನಾಲ್ ಟ್ಯಾಂಕರ್ ರಾಜ್ಯ ಪ್ರವೇಶಿಸಿ ಹೊರ ಹೋಗುವವರೆಗೆ ಅದಕ್ಕೆ ಹೆಸ್ಕಾಟ್ ಸೌಲಭ್ಯ ಒದಗಿಸಲಾಗುತ್ತಿದೆ. ಅಬಕಾರಿ ಕಾಯ್ದೆ ಸೆಕ್ಷನ್ ೫೦ರ ಅಡಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಲಿಕ್ಕರ್ ಟ್ರಿಜರಿ ಆದಾಗ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡದೆ, ಅದರಿಂದ ಯಾವುದೇ ಅವಘಡ ಸಂಭವಿಸಿದರೆ ಸಂಬಂಧಪಟ್ಟವರು ಮೇಲೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ ಎಂದ ಅವರು, ಸಾರಾಯಿ ಮಾರಾಟ ನಿಷೇಧ ಮಾಡಿದ ರಾಜ್ಯಗಳಲ್ಲಿ ವ್ಯಸನಿಗಳು ಸಿಕ್ಕ ಸಿಕ್ಕ ಸ್ಪಿರಿಟ್ ಕುಡಿದು ಸಾರಾಯಿ ದುರಂತಗಳು ಸಂಭವಿಸುತ್ತವೆ. ಅಲ್ಲದೆ ಕಳ್ಳಭಟ್ಟಿ ತಯಾರಿಸುವಾಗ ಬ್ಯಾಟರಿ ಶೆಲ್, ಕಳಸಾಗರ, ಸತ್ತ ಇಲಿ ಸೇರಿದಂತೆ ಅಪಾಯಕಾರಿ ಪದಾರ್ಥಗಳನ್ನು ಬಳಸುತ್ತಾರೆ. ಹೀಗಾಗಿ ಕಳ್ಳಭಟ್ಟಿ ತಯಾರಿಸುವವರ ಮೇಲೆ ದಾಳಿ ನಡೆಸಿ ಒಬ್ಬರಿಗೆ ಶಿಕ್ಷೆ ಆಗುವಂತೆ ಮಾಡಿದರೆ ಶಿಕ್ಷೆ ಭಯದಿಂದ ಹತ್ತಾರು ಜನ ಕಳ್ಳಭಟ್ಟಿ ತಯಾರಿಕೆ ಕೈ ಬಿಡುತ್ತಾರೆ ಎಂದರು.

ರೋಣ ತಾಲೂಕು ಅಬಕಾರಿ ನಿರೀಕ್ಷಕ ಗಂಗಾಧರ ಬಡಿಗೇರ, ಅಬಕಾರಿ ಉಪ ನಿರೀಕ್ಷಕ ಪ್ರವೀಣ ರಂಗಣ್ಣವರ, ಅರಣ್ಯ ಇಲಾಖೆಯ ಪ್ರವೀಣಕುಮಾರ ಸಾಸ್ವಿಹಳ್ಳಿ, ಕಂದಾಯ ನಿರೀಕ್ಷಕ ಪಿ.ಬಿ. ಮಾಲಿಪಾಟೀಲ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಪಿಡಿಒ ಮಂಜುನಾಥ ಪಾಟೀಲ, ಪೊಲೀಸ್ ಇಲಾಖೆಯ ಎಸ್.ಬಿ. ದಾಡಿಬಾವಿ ಸೇರಿ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.

Share this article