ಸಿದ್ದರಾಮಯ್ಯ ಬಜೆಟ್‌ ಮೇಲೆ ಎಲ್ಲರ ಕಣ್ಣು

KannadaprabhaNewsNetwork |  
Published : Feb 16, 2024, 01:49 AM IST
ಬಳ್ಳಾರಿ ತಾಲೂಕಿನ ಚಾಗನೂರು-ಸಿರವಾರ ಬಳಿಯ ವಿಮಾನ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿದೆ.  | Kannada Prabha

ಸಾರಾಂಶ

ಕಳೆದ ವರ್ಷದ ಬಜೆಟ್‌ನಲ್ಲಿ ಬಳ್ಳಾರಿಗೆ ಬಿಡಿಗಾಸೂ ಸಿಗಲಿಲ್ಲ. ಒಂದೇ ಒಂದು ಯೋಜನೆಯ ಪ್ರಸ್ತಾಪವೂ ಆಗಲಿಲ್ಲ. ಈ ಬಾರಿ ಗಡಿ ಜಿಲ್ಲೆಯತ್ತ ಸರ್ಕಾರ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ ರಾಜ್ಯ ಬಜೆಟ್‌ ಮೇಲೆ ಗಣಿ ಜಿಲ್ಲೆಯ ಜನರು ಆಸೆಕಣ್ಣಿನಿಂದ ಎದುರು ನೋಡುತ್ತಿದ್ದಾರೆ.

ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಸಾಕಷ್ಟು ಯೋಜನೆಗಳು ಕಾರ್ಯರೂಪ ಪಡೆದುಕೊಳ್ಳಬೇಕಿದ್ದು, ಈ ಬಾರಿಯಾದರೂ ಜಿಲ್ಲೆಯ ಜನರ ನಿರೀಕ್ಷೆಯನ್ನು ಸಿಎಂ ಸಿದ್ದರಾಮಯ್ಯ ಅವರು ಹುಸಿಗೊಳಿಸದೆ ಅಗತ್ಯ ಅನುದಾನ ಘೋಷಿಸಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರತಿವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಬಳ್ಳಾರಿ ಹೊರವಲಯದಲ್ಲಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಸ್ಥಾಪಿಸಬೇಕು.ಎಂಬ ಒತ್ತಾಯಗಳು ಅನೇಕ ವರ್ಷಗಳಿಂದ ಕೇಳಿ ಬರುತ್ತಲೇ ಇವೆ. ಈ ಸಂಬಂಧ ಅನೇಕ ಹೋರಾಟಗಳು ನಡೆದಿವೆ. ಆದರೆ, ಮಾರುಕಟ್ಟೆ ಸ್ಥಾಪನೆಯ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದಿಂದ ಆಗಾಗ್ಗೆ ಪ್ರಸ್ತಾಪವಾಗುತ್ತಿರುವುದು ಬಿಟ್ಟರೆ, ಮುಂದಿನ ಹಂತದ ಯಾವುದೇ ಕ್ರಮಗಳಾಗಿಲ್ಲ. ಮಾರುಕಟ್ಟೆಗೆ ಬೇಕಾದ ಅನುದಾನ, ಸೂಕ್ತ ಜಾಗ ಹುಡುಕಾಟ ಕೆಲಸವಾಗಿಲ್ಲ.

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ?: ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಯೋಜನೆ ಕಾರ್ಯರೂಪ ಪಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಕ್ರೀಡಾ ಸಚಿವರೂ ಆಗಿದ್ದು, ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕುರಿತಂತೆ ಯಾವುದೇ ಕಾಳಜಿಯ ಕೆಲಸ ಮಾಡಿಲ್ಲ. ಇದಕ್ಕೆ ಸೂಕ್ತ ಅನುದಾನವೂ ಬಿಡುಗಡೆಯಾಗಿಲ್ಲ. ಇದು ಕ್ರೀಡಾಪ್ರೇಮಿಗಳಲ್ಲಿ ತೀವ್ರ ನಿರಾಸೆಯನ್ನುಂಟು ಮಾಡಿದೆಯಲ್ಲದೆ, ಸರ್ಕಾರ ಹಾಗೂ ಸಚಿವರುಗಳ ಘೋಷಣೆಗಳು ಬರೀ ಘೋಷಣೆಗಳಷ್ಟೇ ಹೊರತು, ಅನುಷ್ಠಾನ ಬರುವುದಿಲ್ಲ ಎಂಬ ಕ್ರೀಡಾಸಕ್ತರು ಆರೋಪಿಸುತ್ತಿದ್ದಾರೆ. ಈ ಆರೋಪವನ್ನು ಸಹ ತಳ್ಳಿ ಹಾಕುವಂತಿಲ್ಲ.

ವಿಮಾನ ಹಾರೋದು ಎಂದು?: ಬಳ್ಳಾರಿಯಲ್ಲಿ ವಿಮಾನ ನಿಲ್ದಾಣದ ಪ್ರಸ್ತಾಪ ಕಳೆದ ಒಂದು ದಶಕದಿಂದಲೂ ಕೇಳುತ್ತಾ ಬರುತ್ತಿದೆಯಾದರೂ ವಿಮಾನ ಹಾರೋದು ಎಂದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಮೋಕಾ ರಸ್ತೆಯ ಚಾಗನೂರು ಸಿರಿವಾರ ಬಳಿ ವಿಮಾನ ನಿಲ್ದಾಣಕ್ಕೆಂದು 987 ಎಕರೆ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆಯಾದರೂ ಕಾಮಗಾರಿಯ ಪ್ರಗತಿ ಕಂಡಿಲ್ಲ. ನಿಲ್ದಾಣ ಅಭಿವೃದ್ಧಿಪಡಿಸಲು ಚೆನ್ನೈ ಮೂಲದ "ಮಾರ್ಗ್ " ಕಂಪನಿ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ಸರ್ಕಾರ ರದ್ದು ಮಾಡಿದ್ದು, ಕಳೆದ 13 ವರ್ಷಗಳ ಹಿಂದಿನ ವಿಮಾನ ನಿಲ್ದಾಣದ ಮಹತ್ವದ ಯೋಜನೆ ಸ್ಥಗಿತವಾಗಿದೆ. ಈ ಬಾರಿಯ ಬಜೆಟ್‌ನಲ್ಲಾದರೂ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

ಅಭಿವೃದ್ಧಿಗೆ ಬೇಕು ಪ್ಯಾಕೇಜ್: ಹೆಸರಿಗಷ್ಟೇ ಮಹಾನಗರ ಎನಿಸಿಕೊಂಡಿರುವ ಬಳ್ಳಾರಿಯ ಅಭಿವೃದ್ಧಿ ನಿಂತ ನೀರಾಗಿದೆ. ಅವೈಜ್ಞಾನಿಕ ಚರಂಡಿ, ಕುಡಿಯುವ ನೀರು ಪೂರೈಕೆ ವ್ಯವಸ್ಥೆ, ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು ಕಣ್ಣಿಗೆ ರಾಚುತ್ತವೆ. ನಗರದ ಅನೇಕ ಕಾಲನಿಗಳು ಮಳೆಗಾಲದಲ್ಲಿ ನಡುಗಡ್ಡೆಯಾಗುತ್ತಿದ್ದು, ಮಳೆ ಬಂತೆಂದರೆ ಆತಂಕಗೊಳ್ಳುವ ಸ್ಥಿತಿಯಿದೆ. ಆದರೆ, ನಗರ ಅಭಿವೃದ್ಧಿಗೆ ಅನುದಾನ ಕೊರತೆ ಎಂಬ ನೆಪವೊಡ್ಡಿ ಜನಸಂಕಷ್ಟಗಳಿಗೆ ಸ್ಪಂದಿಸುವ ಕಾಳಜಿ ಮರೆಯಾಗಿದೆ. ಬಳ್ಳಾರಿ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಅನುದಾನ ಬಿಡುಗಡೆಗೊಳಿಸುವ ಕಾಳಜಿ ಕೆಲಸ ಸರ್ಕಾರದಿಂದಾಗಬೇಕಾಗಿದೆ.

ಇನ್ನು ತಾಲೂಕು ಕೇಂದ್ರಗಳಾದ ಕುರುಗೋಡು ಹಾಗೂ ಕಂಪ್ಲಿ ಅಭಿವೃದ್ಧಿ ನಿರೀಕ್ಷೆಯಲ್ಲಿಯೇ ದಿನದೂಡುತ್ತಿವೆ. ತಾಲೂಕು ಕೇಂದ್ರಗಳಾಗಿ ಘೋಷಿಸಿ ಆರೇಳು ವರ್ಷಗಳಾದರೂ ಈವರೆಗೆ ಪೂರಕ ಅಭಿವೃದ್ಧಿಗೆ ತೆರೆದುಕೊಂಡಿಲ್ಲ.

ಕೈಗಾರಿಕೆ ಸ್ಥಾಪನೆಗೆ ಆಗ್ರಹ

ಕೈಗಾರಿಕೆ ಸ್ಥಾಪನೆಗೆಂದು ತಾಲೂಕಿನ ಕುಡಿತಿನಿ ಬಳಿ ಎನ್‌ಎಂಡಿಸಿ, ಬ್ರಹ್ಮಿಣಿ ಹಾಗೂ ಮಿತ್ತಲ್ ಕಂಪನಿಗಳು 12 ಸಾವಿರ ಎಕರೆ ಜಮೀನು ವಶಪಡಿಸಿಕೊಂಡಿದ್ದು, ಕೈಗಾರಿಕೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಕುಡಿತಿನಿಯಲ್ಲಿ ಕಳೆದ 400 ದಿನಗಳಿಂದ ರೈತರು ಅನಿರ್ದಿಷ್ಟ ಹೋರಾಟ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಕೈಗಾರಿಕೆ ಸ್ಥಾಪನೆಗೆ ಸಂಬಂಧ ಸೂಕ್ತ ನಿಲುವು ತೆಗೆದುಕೊಳ್ಳುವ ನಿರೀಕ್ಷೆ ರೈತರದ್ದು.

ಕಳೆದ ವರ್ಷದ ಬಜೆಟ್‌ನಲ್ಲಿ ಬಳ್ಳಾರಿಗೆ ಬಿಡಿಗಾಸೂ ಸಿಗಲಿಲ್ಲ. ಒಂದೇ ಒಂದು ಯೋಜನೆಯ ಪ್ರಸ್ತಾಪವೂ ಆಗಲಿಲ್ಲ. ಈ ಬಾರಿ ಗಡಿ ಜಿಲ್ಲೆಯತ್ತ ಸರ್ಕಾರ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಕೈಕೈಗಾರಿಕೆ ಆರಂಭಿಸಿ: ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು. ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಪ್ರಮುಖವಾಗಿ ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಪಡೆದ ಜಮೀನಿನಲ್ಲಿ ಶೀಘ್ರವೇ ಕೈಗಾರಿಕೆಗಳನ್ನು ಆರಂಭಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ವಿ.ಎಸ್. ಶಿವಶಂಕರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ