೨೩, ೨೪ಕ್ಕೆ ವೀರಶೈವ ಲಿಂಗಾಯತರ ಮಹಾ ಅಧಿವೇಶನ: ಮಾಜಿ ಸಚಿವೆ ಡಾ. ಗೀತಾ ಮಹದೇವಪ್ರಸಾದ್ ಮಾಹಿತಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ೨೪ನೇ ಮಹಾ ಅಧಿವೇಶನವು ಡಿ. ೨೩ ಮತ್ತು ೨೪ ರಂದು ಎರಡು ದಿನ ನಡೆಯಲಿದೆ ಎಂದು ಮಾಜಿ ಸಚಿವೆ ಡಾ. ಗೀತಾ ಮಹದೇವಪ್ರಸಾದ್ ಮಾಹಿತಿ ನೀಡಿದರು.

ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ । ವೀರಶೈವ-ಲಿಂಗಾಯತ ಸಮುದಾಯಗಳ ಶಕ್ತಿ ಪ್ರದರ್ಶನ ಕನ್ನಡಪ್ರಭ ವಾರ್ತೆ ಚಾಮರಾಜನಗರ

ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ೨೪ನೇ ಮಹಾ ಅಧಿವೇಶನವು ಡಿ. ೨೩ ಮತ್ತು ೨೪ ರಂದು ಎರಡು ದಿನ ನಡೆಯಲಿದ್ದು, ಈ ಅಧಿವೇಶನಕ್ಕೆ ಜಿಲ್ಲೆಯಿಂದ ವೀರಶೈವ-ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಮಾಜಿ ಸಚಿವೆ ಡಾ. ಗೀತಾ ಮಹದೇವಪ್ರಸಾದ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೦೪ ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪನೆಗೊಂಡಿದ್ದು, ಕಳೆದ ೧೧೯ ವರ್ಷದಿಂದಲೂ ವೀರಶೈವ- ಲಿಂಗಾಯತ ಸಂಘಟನೆ ಮತ್ತು ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದೆ. ಮಹಾಸಭೆಗೆ ೧.೭೫ ಲಕ್ಷಕ್ಕೂ ಹೆಚ್ಚು ಸದಸ್ಯರು ಇದ್ದು, ಬೆಂಗಳೂರಿನಲ್ಲಿ ತನ್ನದೇ ವೀರಶೈವ-ಲಿಂಗಾಯತ ಭವನವನ್ನು ಹೊಂದಿದೆ ಎಂದರು.

10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ:

ಸಮುದಾಯ ಸಂಘಟನೆಗೆ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಇಂದಿನ ವೀರಶೈವ ಲಿಂಗಾಯತರನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟನೆ ಉದ್ದೇಶದಿಂದ ಇಲ್ಲಿಯವರೆಗೆ ೨೩ ಮಹಾ ಅಧಿವೇಶವನ್ನು ಸಂಘಟನೆ ಮಾಡಲಾಗಿದೆ. ಈಗ ಡಿ. ೨೩ ಮತ್ತು ೨೪ ರಂದು ದಾವಣಗೆರೆ ನಗರದಲ್ಲಿ ೨೪ನೇ ಮಹಾ ಅಧಿವೇಶವನ್ನು ಏರ್ಪಡಿಸಲಾಗಿದೆ. ಈ ಎರಡು ದಿನಗಳ ಕಾಲ ಅಧಿವೇಶನಕ್ಕೆ ನಾಡಿನ ವಿವಿಧ ಮಠಾದೀಶರು, ಸಾಹಿತಿಗಳು, ಕಲಾವಿದರು, ಮುಖಂಡರು, ಮಹಿಳಾ ಪ್ರತಿನಿಧಿಗಳು ೩೧ ಜಿಲ್ಲೆಗಳ ಶರಣ- ಶರಣೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಅಧಿವೇಶನದಲ್ಲಿ ೧೦ ಲಕ್ಷಕ್ಕು ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಜಿಲ್ಲೆಯ ಐದು ತಾಲೂಕುಗಳಿಂದ ಬಸ್ ಹಾಗೂ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲಿದ್ದಾರೆ. ಮಹಿಳೆಯರಿಗಾಗಿ ಒಂದು ಪ್ರತ್ಯೇಕ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಮಹಿಳಾ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನಾಗೇಂದ್ರ, ತಾಲೂಕು ಅಧ್ಯಕ್ಷ ಹೊಸೂರು ನಟೇಶ್, ಜಿಲ್ಲಾ ನಿರ್ದೇಶಕರಾದ ಕಾಡಹಳ್ಳಿ ಮಧು, ಪ್ರಮೋದ್ ಇದ್ದರು.

ಒಬಿಸಿ ಪಟ್ಟಿಗೆ ಸೇರಿಸಲು ಚರ್ಚೆ

ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಅಧಿವೇಶನದಲ್ಲಿ ಪ್ರಮುಖವಾಗಿ ಸಮುದಾಯ ಅಭಿವೃದ್ದಿ ವಿಚಾರವಾಗಿ ಚರ್ಚೆ ನಡೆಯಲಿದ್ದು, ವೀರಶೈವ-ಲಿಂಗಾಯತ ಸಮುದಾಯವರು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದು, ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮುದಾಯ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲು ತೀರ್ಮಾನಿಸಲಾಗುತ್ತದೆ. ಕಾಂತರಾಜು ಆಯೋಗ ವೈಜ್ಞಾನಿಕವಾಗಿದ್ದು, ಮತ್ತೊಮ್ಮೆ ಸಮೀಕ್ಷೆ ಮಾಡಲು ಒತ್ತಾಯಿಸುವುದು ಸೇರಿದಂತೆ ಅನೇಕ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೆ ಡಾ. ಗೀತಾ ಮಹದೇವಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಡಿ. ನಾಗೇಂದ್ರ, ತಾಲೂಕು ಅಧ್ಯಕ್ಷ ಹೊಸೂರು ನಟೇಶ್, ನಿರ್ದೇಶಕರಾದ ಕಾಡಹಳ್ಳಿ ಮಧು, ಪ್ರಮೋದ್ ಇದ್ದಾರೆ.

Share this article