ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಜಿಲ್ಲಾಧ್ಯಕ್ಷರಾಗಿ ಶಿರಕೋಳ ಶ್ರೀ ಆಯ್ಕೆ

KannadaprabhaNewsNetwork |  
Published : Sep 04, 2025, 01:00 AM IST
ಸಮಾವೇಶದಲ್ಲಿ ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರಿಗೆ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಪಂಚಾಚಾರ್ಯರ ಧರ್ಮಧ್ವಜ ನೀಡಿ ಗೌರವಿಸಿದರು. | Kannada Prabha

ಸಾರಾಂಶ

ಚಂದ್ರಶೇಖರ ಶಿವಾಚಾರ್ಯರು ಆಯ್ಕೆಯಾದ ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರಿಗೆ ಪಂಚಾಚಾರ್ಯರ ಧರ್ಮಧ್ವಜ ನೀಡಿ ಮತ್ತು ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲ ಶ್ರೀಗಳನ್ನು ಗೌರವಿಸಿದರು.

ಧಾರವಾಡ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಶಾಂತಲಿಂಗ ಶಿವಾಚಾರ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಬುಧವಾರ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನಮಠದ ಚಂದ್ರಶೇಖರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ವೀರಶೈವ ಧರ್ಮದ ಪಂಚಪೀಠಗಳ ಎಲ್ಲ ಶಾಖಾ ಮಠಗಳ ಶಿವಾಚಾರ್ಯ ಶ್ರೀಗಳ ಪ್ರಥಮ ಸಮಾವೇಶದಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ನವಲಗುಂದ ಪಂಚಗೃಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು ಹಾಗೂ ಹುಬ್ಬಳ್ಳಿ ನವನಗರ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯ, ಜಂಟಿ ಕಾರ್ಯದರ್ಶಿಗಳಾಗಿ ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು ಮತ್ತು ಮೊರಬ ಜಡಿಮಠದ ಶ್ರೀ ಮಹೇಶ್ವರ ಶಿವಾಚಾರ್ಯರು, ಕೋಶಾಧ್ಯಕ್ಷರಾಗಿ ತುಪ್ಪದಕುರಹಟ್ಟಿ ಹಿರೇಮಠದ ಶ್ರೀವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಕಾರ್ಯಕಾರಿಣಿ ಸದಸ್ಯರುಗಳಾಗಿ ಕುಂದಗೋಳ ಪಂಚಗೃಹ ಹಿರೇಮಠದ ಶಿಥಿಕಂಠೇಶ್ವರ ಶಿವಾಚಾರ್ಯರು, ಶಿಂಗನಹಳ್ಳಿಯ ರಾಚೋಟೇಶ್ವರ ಶಿವಾಚಾರ್ಯರು, ಕಲಘಟಗಿ ಹನ್ನೆರಡುಮಠದ ಅಭಿನವ ಮಡಿವಾಳ ಶಿವಾಚಾರ್ಯರು, ಹಳ್ಯಾಳ- ಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ಶ್ರೀ ರೇಣುಕ ಪ್ರಸಾದ ಸ್ವಾಮೀಜಿ, ತಿರುಮಲಕೊಪ್ಪ ಜ. ರೇಣುಕ ಧರ್ಮನಿವಾಸದ ದಾನೇಶ್ವರ ಸ್ವಾಮೀಜಿ ಆಯ್ಕೆಯಾದರು.

ಧರ್ಮಧ್ವಜ ಪ್ರದಾನ: ಚಂದ್ರಶೇಖರ ಶಿವಾಚಾರ್ಯರು ಆಯ್ಕೆಯಾದ ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರಿಗೆ ಪಂಚಾಚಾರ್ಯರ ಧರ್ಮಧ್ವಜ ನೀಡಿ ಮತ್ತು ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲ ಶ್ರೀಗಳನ್ನು ಗೌರವಿಸಿದರು.

ಇದೇ ಸಂದರ್ಭದಲ್ಲಿ ಹುಕ್ಕೇರಿ ಶ್ರೀಗಳನ್ನು ಹಾಗೂ ಅಭಾ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಳಗಾವಿ ಜಿಲ್ಲಾಧ್ಯಕ್ಷ ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಉಭಯ ಶ್ರೀಗಳು ಗೌರವಿಸಿದರು. ಕಲಘಟಗಿ ಹನ್ನೆರಡುಮಠದ ಶ್ರೀರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಸಮಾವೇಶದ ನಿರ್ಣಯಗಳು: ಶಿವಾಚಾರ್ಯ ಶ್ರೀಗಳ ಪ್ರಥಮ ಸಮಾವೇಶದಲ್ಲಿ ಕೈಕೊಂಡ ನಿರ್ಣಯಗಳು.

ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಮೂಲವಾಹಿನಿ ಕೇಂದ್ರೀಕರಿಸಿ ವೀರಶೈವ-ಲಿಂಗಾಯತ ಧರ್ಮ ಜಾಗೃತಿಗೆ ವಿಸ್ತೃತ ಅಭಿಯಾನ ಕೈಕೊಳ್ಳುವುದು, ವೀರಶೈವ ಧರ್ಮ ಸಂಸ್ಥಾಪನೆಯ ಪಂಚಪೀಠಗಳಾದ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಪ್ರಾಚೀನ ಮೂಲ ಗುರುಪರಂಪರೆಯನ್ನು ವ್ಯವಸ್ಥಿತವಾಗಿ ಪ್ರಚುರಪಡಿಸುವುದು, ಬಸವಾದಿ ಶಿವಶರಣರು ಹಾಗೂ ಅ.ಭಾ. ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಹಾನಗಲ್ಲದ ಕುಮಾರ ಮಹಾಸ್ವಾಮಿಗಳು ನಿರೂಪಿಸಿದ ಚಿಂತನೆಗಳನ್ನೂ ಭಕ್ತಗಣಕ್ಕೆ ತಿಳಿಸುವುದು, ಕನಿಷ್ಠ ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲ ಶಿವಾಚಾರ್ಯರು ಸಮಾವೇಶಗೊಂಡು ಧರ್ಮ ಜಾಗೃತಿ ಚಿಂತನೆಗೈದು ಅನುಷ್ಠಾನಗೊಳಿಸುವುದು, ಹು-ಧಾ ಮಹಾನಗರ ಸೇರಿ ಎಲ್ಲ ತಾಲೂಕು ಕೇಂದ್ರ ಸ್ಥಾನಗಳು, ಹೋಬಳಿ ಮತ್ತು ದೊಡ್ಡ ಗ್ರಾಮಗಳಲ್ಲಿ ಹಂತ ಹಂತವಾಗಿ ವರ್ಷದುದ್ದಕ್ಕೂ ಧರ್ಮ ಜಾಗೃತಿ ಸಮಾವೇಶ ಸಂಘಟಿಸುವುದು ಮತ್ತು ಸಾಂದರ್ಭಿಕವಾಗಿ ಜಿಲ್ಲೆಯ ವಿವಿಧ ಮಠಗಳಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜಾ ಕೈಂಕರ್ಯ ಸಂಘಟಿಸಿ ಇಷ್ಟಲಿಂಗ ದೀಕ್ಷೆ ನೀಡುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು