ಕನ್ನಡ ಪರಿಚಾರಕರೆಲ್ಲರೂ ಸಮ್ಮೇಳನಾಧ್ಯಕ್ಷತೆಗೆ ಅರ್ಹರು: ಸಾಹಿತಿ ಬನ್ನೂರು ಕೆ. ರಾಜು

KannadaprabhaNewsNetwork | Published : Oct 11, 2024 11:49 PM

ಸಾರಾಂಶ

ಸಾಹಿತಿಗಳು ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೆಂದು ಕೆಲವು ಮಂದಿ ಕೂಗೆಬ್ಬಿಸುತ್ತಿರುವುದು ಸರಿಯಲ್ಲ. ವಾಸ್ತವವಾಗಿ ಕನ್ನಡ ಮತ್ತು ಕನ್ನಡ ಸಾಹಿತ್ಯ ಉಳಿದಿರುವುದೇ ಕನ್ನಡ ಹೋರಾಟಗಾರರು ಹಾಗೂ ಕನ್ನಡ ಪರಿಚಾರಕರಿಂದ ಮಾತ್ರ. ವಸ್ತುಸ್ಥಿತಿ ಹೀಗಿರುವಾಗ ಕನ್ನಡ ಹೋರಾಟಗಾರರು, ಕನ್ನಡ ಪರಿಚಾರಕರನ್ನೂ ಸಮ್ಮೇಳನಾಧ್ಯಕ್ಷರನ್ನಾಗಿಸಲು ಪರಿಗಣಿಸಬೇಕು .

ಕನ್ನಡಪ್ರಭ ವಾರ್ತೆ ಮೈಸೂರು

ಭಾಷಾಭಿಮಾನದಿಂದ ನಾಡು ಕಟ್ಟುವ ಕೈಂಕರ್ಯದಲ್ಲಿ ನಿತ್ಯ ನಿರತರಾಗಿರುವ ಕನ್ನಡದ ಪರಿಚಾರಕರೆಲ್ಲರೂ ಮಹತ್ವ ಪೂರ್ಣವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂದು ಸಾಹಿತಿ ಬನ್ನೂರು ಕೆ. ರಾಜು ತಿಳಿಸಿದರು.

ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರಿನ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್‌ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕವಿರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಾಹಿತಿಗಳು ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೆಂದು ಕೆಲವು ಮಂದಿ ಕೂಗೆಬ್ಬಿಸುತ್ತಿರುವುದು ಸರಿಯಲ್ಲ. ವಾಸ್ತವವಾಗಿ ಕನ್ನಡ ಮತ್ತು ಕನ್ನಡ ಸಾಹಿತ್ಯ ಉಳಿದಿರುವುದೇ ಕನ್ನಡ ಹೋರಾಟಗಾರರು ಹಾಗೂ ಕನ್ನಡ ಪರಿಚಾರಕರಿಂದ ಮಾತ್ರ. ವಸ್ತುಸ್ಥಿತಿ ಹೀಗಿರುವಾಗ ಕನ್ನಡ ಹೋರಾಟಗಾರರು, ಕನ್ನಡ ಪರಿಚಾರಕರನ್ನೂ ಸಮ್ಮೇಳನಾಧ್ಯಕ್ಷರನ್ನಾಗಿಸಲು ಪರಿಗಣಿಸಬೇಕು ಎಂದರು.

ವಿವಿಧ ಕ್ಷೇತ್ರದ ಸಾಧಕರಿಗೆ ಎಂ.ಬಿ. ಅಳವಂಡಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಮತ್ತು ಕವಿರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಕವಿ ಎಂ.ಬಿ. ಜಯಶಂಕರ್ ಅವರ ಮುಳ್ಳುಕಂಟಿಯ ಹೂಗಳು ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಸಮ್ಮೇಳನದ ಸಂಚಾಲಕ ರುದ್ರಪ್ಪ ಭಂಡಾರಿ, ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚಲನಚಿತ್ರ ನಿರ್ದೇಶಕ ರಮೇಶ್ ಸುರ್ವೆ, ವಕೀಲ ಎಂ.ಎಚ್. ಉಜ್ಜಮ್ಮನವರ್ ರಾಜೂರ, ಜಂಬಣ್ಣ ಜಿ. ಅಂಗಡಿ ಕುಕನೂರ, ಶಿವಣ್ಣ ರಾಯರೆಡ್ಡಿ, ಟಿ. ತ್ಯಾಗರಾಜು, ಶಿವಣ್ಣ ರಾಯರೆಡ್ಡಿ ಇದ್ದರು. ವಾಣಿ ಭಟ್, ಶ್ರುತಿ ತಂಡದವರು ಪ್ರಾರ್ಥಿಸಿದರು. ರಂಗಸ್ವಾಮಿ ಪಂಡಿತ್ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ನಾರಾಯಣ ಮತ್ತು ದೀಪಶ್ರೀ ನಿರೂಪಿಸಿದರು.

Share this article