ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಾತ್ರೆಯ ಅಂಗವಾಗಿ ದೇವಸ್ಥಾನದ ಅಡಳಿತ ಮಂಡಳಿ ಮತ್ತು ಮಹಾನಗರ ಪಾಲಿಕೆ , ರಕ್ಷಣಾ ಇಲಾಖೆ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರೊಂದಿಗೆ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
2 ವರ್ಷಕ್ಕೊಮ್ಮೆ ನಡೆಯುವ ದೇವಿಯ ಉತ್ಸವಕ್ಕೆ ಪ್ರತಿಬಾರಿಯೂ ಕೂಡ ಬಂದಿರುವಂತಹ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು ಸಹಕಾರ ನೀಡಿದ್ದೀರಿ, ಈ ಬಾರಿಯೂ ಸಹ ನಿಮ್ಮ ಸಹಕಾರ ಮುಂದುವರೆಯಲಿ ಎಲ್ಲರೂ ಸೇರಿ ಸ್ನೇಹಮಯವಾದ ದೇವಿಯ ಉತ್ಸವವನ್ನು ಮಾಡೋಣ ಎಂದು ಮಾರಿಕಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು.ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಈ ಹಿಂದೆ ನಡೆದ ಎಲ್ಲಾ ಜಾತ್ರೆಗಳ ಯಶಸ್ಸಿನಲ್ಲಿ ಈಗ ನೆರೆದಿರುವ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವಕ್ಕೂ ಸಹ ನಿಮ್ಮ ಸಹಕಾರವನ್ನು ನಾವು ಅಪೇಕ್ಷಿಸುತ್ತೇವೆ. ನಿಮಗೆ ಬೇಕಾದಂತಹ ಹಾಗೂ ನೀವು ಹೇಳುವಂತಹ ಎಲ್ಲಾ ಸೂಚನೆಗಳು ಹಾಗೂ ಅವಶ್ಯಕತೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪೂರೈಸುತ್ತದೆ ಎಂದರು.
ಸ್ವಚ್ಚತಾ ಕಾರ್ಯಕ್ಕಾಗಿ ಗ್ರಾಮೀಣ ಭಾಗದಿಂದ 60 ಜನರ ತಂಡವನ್ನು ಕರೆಸಿಕೊಳ್ಳಲಾಗಿದೆ. ಅವರುಗಳಿಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗಿದೆ. 30 ಜನರಿರುವ 2 ತಂಡಗಳನ್ನು ರಚಿಸಲಾಗಿದ್ದು, ಇವರುಗಳು ಸ್ವಚ್ಚತಾ ಕಾರ್ಯದಿಂದ ಆರಂಭಗೊಂಡು ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಲಿದ್ದಾರೆ. ಪಾಲಿಕೆ ಸಿಬ್ಬಂದಿ ಊರ ಹಬ್ಬವಾಗಿರುವುದರಿಂದ ಈ ಕೆಲಸದಲ್ಲಿ ತೊಡಗಲು ಆಗುತ್ತಿಲ್ಲ. ಅವರುಗಳು ಸಹ ಹಬ್ಬವನ್ನು ಆಚರಿಸಲಿ ಎಂಬ ಉದ್ದೇಶದಿಂದ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಜನಸಂದಣಿ ಇರುವ ಕಡೆ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೇ ವಾಚ್‌ಟವರ್‌ಗಳನ್ನು ನಿರ್ಮಿಸಿಕೊಡಲಾಗುತ್ತದೆ. ಒಟ್ಟಾರೆ ಜಾತ್ರೆಯ ಯಶಸ್ಸಿಗೆ ಬೇಕಾದಂತಹ ಎಲ್ಲಾ ರೀತಿಯ ಕ್ರಮಗಳನ್ನು ಪಾಲಿಕೆ ನೀಡಲಿದೆ ಎಂದು ಹೇಳಿದರು.
ಸಭೆಯಲ್ಲಿ ಪಾಲಿಕೆಯ ವಿವಿಧ ವಿಭಾಗದ ಅಧಿಕಾರಿಗಳು, ರಕ್ಷಣಾ ಇಲಾಖೆಯ ಹರೀಶ್ ಪಾಟೀಲ್, ರವಿ ಪಾಟೀಲ, ಸಂತೋಷ್ ಹಾಗೂ ಮಾರಿಕಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.