ಶಿಕ್ಷಣ ಕಲಿಸಿದ ಗುರುಗಳಿಂದ ಬದುಕು ಕಟ್ಟಿಕೊಂಡ ನಾವೆಲ್ಲರೂ ನಮ್ಮ ಜೀವನದಲ್ಲಿ ಶಿಕ್ಷಕರನ್ನು ಮರೆಯಲು ಸಾಧ್ಯವೇ ಇಲ್ಲ. ನೀವೆಲ್ಲಾ ೫೦ ವರ್ಷಗಳ ಹಿಂದೆ ಈ ಶಾಲೆಯಲ್ಲಿ ಓದಿ ಅಂದು ಈ ಶಾಲೆಯಲ್ಲಿ ಶಿಕ್ಷಕರಾಗಿದ್ದವರಿಗೆ ಹಾಗೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗವಾಗಿರುವ ಎಲ್ಲಾ ಶಿಕ್ಷಕ, ಶಿಕ್ಷಕಿಯರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಈ ಗೌರವ ಶಿಕ್ಷಕರಿಗೆ ಮಾತ್ರ ಸಿಗುತ್ತದೆ. ಇಂತಹ ಕಾರ್ಯಕ್ರಮ ಏರ್ಪಡಿಸಿ ನಿಮ್ಮ ಶಿಕ್ಷಕರನ್ನೆಲ್ಲಾ ಗುರುಗಳ ಸ್ಥಾನದಲ್ಲಿಟ್ಟು ಗೌರವಿಸಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಎಂ.ಎಂ.ಎ.ಕೆ. ಸರ್ಕಾರಿ ಶಾಲೆಯ 50 ವರ್ಷಗಳ ಹಿಂದಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿದ್ದರು.ಶಿಕ್ಷಣ ಕಲಿಸಿದ ಗುರುಗಳಿಂದ ಬದುಕು ಕಟ್ಟಿಕೊಂಡ ನಾವೆಲ್ಲರೂ ನಮ್ಮ ಜೀವನದಲ್ಲಿ ಶಿಕ್ಷಕರನ್ನು ಮರೆಯಲು ಸಾಧ್ಯವೇ ಇಲ್ಲ. ನೀವೆಲ್ಲಾ ೫೦ ವರ್ಷಗಳ ಹಿಂದೆ ಈ ಶಾಲೆಯಲ್ಲಿ ಓದಿ ಅಂದು ಈ ಶಾಲೆಯಲ್ಲಿ ಶಿಕ್ಷಕರಾಗಿದ್ದವರಿಗೆ ಹಾಗೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗವಾಗಿರುವ ಎಲ್ಲಾ ಶಿಕ್ಷಕ, ಶಿಕ್ಷಕಿಯರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಈ ಗೌರವ ಶಿಕ್ಷಕರಿಗೆ ಮಾತ್ರ ಸಿಗುತ್ತದೆ. ಇಂತಹ ಕಾರ್ಯಕ್ರಮ ಏರ್ಪಡಿಸಿ ನಿಮ್ಮ ಶಿಕ್ಷಕರನ್ನೆಲ್ಲಾ ಗುರುಗಳ ಸ್ಥಾನದಲ್ಲಿಟ್ಟು ಗೌರವಿಸಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಬಣ್ಣಿಸಿದರು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಎಂ.ಎಂ.ಎ.ಕೆ. ಸರ್ಕಾರಿ ಶಾಲೆ ಶತಮಾನ ಪೂರೈಸಿದ್ದು, ಈ ಶಾಲೆಯಲ್ಲಿ ೫೦ ವರ್ಷಗಳ ಹಿಂದೆ ೧ನೇ ತರಗತಿಗೆ ಸೇರಿದ್ದ ವಿದ್ಯಾರ್ಥಿಗಳು ನಿವೃತ್ತರಾಗಿರುವ ಅಂದಿನ ಶಿಕ್ಷಕರನ್ನು ಹಾಗೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗವಾದ ಎಲ್ಲಾ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮ ಈ ಕಾರ್ಯಕ್ರಮ ನೋಡಿದ ನಂತರ ನಾನೂ ಕೂಡ ನನ್ನ ಜೊತೆ ಓದುತ್ತಿದ್ದ ಗೆಳೆಯರನ್ನೆಲ್ಲಾ ಸೇರಿಸಿ ನನಗೆ ವಿದ್ಯೆ ಕಲಿಸಿದ ಗುರುಗಳಿಗೆ ಇಂತಹದೇ ಗುರುವಂದನೆ ಸಲ್ಲಿಸಲು ನಿರ್ಧರಿಸಿದ್ದೇನೆ. ನಿಮ್ಮ ಈ ಕಾರ್ಯಕ್ರಮ ನನಗೆ ಪ್ರೇರಣೆ ನೀಡಿದೆ ಎಂದರು. ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ವಿದ್ಯೆ ಕಲಿಸಿದ ವಿದ್ಯಾರ್ಥಿಗಳೆಲರನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯ ಇಲ್ಲ. ಆದರೆ ವಿದ್ಯೆ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯೆ ಕಲಿಸಿದ, ನೀತಿ ಹೇಳಿದ ಶಿಕ್ಷಕರನ್ನು ಜೀವಿತಾವಧಿವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ನೋಬಲ್ ವೃತ್ತಿ ಶಿಕ್ಷಕ ವೃತ್ತಿ ಎಂದರು.ಶಾಲೆಯ ಮುಖ್ಯಶಿಕ್ಷಕ ಮಹೇಶಪ್ಪ ಮಾತನಾಡಿ ಈ ಶಾಲೆ ೧೯೧೯ರಲ್ಲಿ ಪ್ರಾರಂಭವಾಗಿ ೧೦೭ ನೇ ವರ್ಷ ಆಚರಿಸುತ್ತಿದೆ. ೧೯೮೨/೮೩ನೇ ಸಾಲಿನಲ್ಲಿ ಈ ಶಾಲೆಗೆ ೧ ನೇ ತರಗತಿಗೆ ಸೇರಿಕೊಂಡ ವಿದ್ಯಾರ್ಥಿಗಳೆಲ್ಲಾ ಸೇರಿ ಅಂದು ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕರನ್ನೆಲ್ಲಾ ಹಾಗೂ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬೇರೆಡೆ ವರ್ಗವಾದ ಶಿಕ್ಷಕರನ್ನೆಲ್ಲಾ ಒಟ್ಟಾಗಿ ಸೇರಿಸಲು ಮೂರು ತಿಂಗಳಿಗೂ ಹೆಚ್ಚು ಶ್ರಮ ಪಟ್ಟು ಇಂದು ಗುರುವಂದನೆ ಸಲ್ಲಿಸುತ್ತಿದ್ದಾರೆ. ಇಂತಹ ಗುರುವಂದನೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ ಸಿಗಲು ಸಾಧ್ಯ. ಈ ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದೆ ಎಂದು ವಿವರಿಸಿದರು. ೫೦ ವರ್ಷ ಹಿಂದೆ ಓದಿದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಗುಲಾಬಿ ಬಣ್ಣದ ಅಂಗಿ, ವಿದ್ಯಾರ್ಥಿನಿಯರು ಮೆರೂನ್ ಬಣ್ಣದ ಸೀರೆ ಉಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ನಿವೃತ್ತ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಸಿ ಬೇರೆಡೆ ವರ್ಗವಾಗಿರುವ ಶಿಕ್ಷಕ, ಶಿಕ್ಷಕಿಯರಿಗೆ ಶಾಲು ಹೊದಿಸಿ, ಪೇಟ, ಹಾರ ಹಾಕಿ ಹಣ್ಣಿನ ಬುಟ್ಟಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು. ಶಿಕ್ಷಕರಾದ ಎಂ.ಕೆ. ಗುರುವಯ್ಯ, ಸುಶೀಲಮ್ಮ, ಎಚ್.ಟಿ. ನಾಗರತ್ನಾ, ಬೋಜರಾಜ್,ಪದ್ಮಜಾ, ಪ್ರೇಮಾ ಸೇರಿದಂತೆ ಅನೇಕರನ್ನು ಸನ್ಮಾನಿಸಿದರು. ಚಂದನಾ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಬಂಡೆ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.