ಕೊಪ್ಪಳ: ಕೊಪ್ಪಳ ಹೋಳಿ ಹಬ್ಬ 2.0 ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾ. 4ರಂದು ಕೊಪ್ಪಳದಲ್ಲಿ ಕಳೆದ ವರ್ಷಕ್ಕಿಂತಲೂ ಮತ್ತಷ್ಟು ರಂಗು ರಂಗಿನಿಂದ ಆಚರಣೆ ಮಾಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೂ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಸಿಸಿ ಕ್ಯಾಮೆರಾ ಕಣ್ಗಾವಲು ಸಹ ಇರುತ್ತದೆ. ಪೊಲೀಸ್ ಇಲಾಖೆಯೂ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸುತ್ತದೆ ಎಂದರು.
ಈ ವರ್ಷ ಪಿಯು ಪರೀಕ್ಷೆ ಇರುವುದರಿಂದ ಸಮಸ್ಯೆಯಾಗಿದ್ದು, ಈಗಾಗಲೇ ಜಿಲ್ಲಾಡಳಿತದೊಂದಿಗೆ ಚರ್ಚೆ ಮಾಡಲಾಗಿದೆ. ಪರೀಕ್ಷೆಗೆ ತೊಂದರೆಯಾಗದಂತೆ ಸಮಯ ಬದಲಾಯಿಸಿಕೊಳ್ಳಲಾಗುವುದು. ಹೀಗಾಗಿ, ಕೆಲವೇ ದಿನಗಳಲ್ಲಿ ಸಮಯದ ಮಾಹಿತಿ ನೀಡಲಾಗುವುದು. ವಿದ್ಯಾರ್ಥಿಗಳ ಪರೀಕ್ಷಾ ಸಮಯ ಮುಗಿದ ಮೇಲೆಯೇ ಹೋಳಿ ಹಬ್ಬ ಆಚರಿಸಲಾಗುವುದು. ಈ ವರ್ಷ ಗಡಿಯಾರ ಕಂಬದಿಂದ ಮೆರವಣಿಗೆ ನಡೆಯಲಿದೆ ಎಂದರು.ಕಳೆದ ವರ್ಷದಂತೆ ಡಿಜೆ ಸೌಂಡ್, ರೇನ್ ಡ್ಯಾನ್ಸ್, ಖ್ಯಾತ ಕಲಾವಿದರಿಂದ ನಿರೂಪಣೆ ಇರುತ್ತದೆ. ಬೆಳಗ್ಗೆ ಉಪಾಹಾರ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಬಣ್ಣ ಆಡಲು ಬರುವ ಸಾರ್ವಜನಿಕರಿಗೆ ಬಣ್ಣದ ಪ್ಯಾಕೆಟ್‌ಗಳನ್ನು ಅಥ್ಲೆಟಿಕ್ಸ್ ಅಸೋಸಿಯೇಶನ್ ಮೂಲಕ ವಿತರಣೆ ಮಾಡಲಾಗುವುದು ಎಂದರು.
ಅಭಿವೃದ್ಧಿ ಸಹಿಸದೆ ಬಿಜೆಪಿಯವರು ನನ್ನ ಮೇಲೆ ಗೂಬೆ ಕೂರಿಸುವ ಹುನ್ನಾರ: ಹುಲಿಕೆರೆ ಬಳಿ ರಸ್ತೆ ಮಾಡುವಾಗ ಸುಮ್ಮನಿದ್ದವರು ಆನಂತರ ವಿರೋಧ ಮಾಡಿದ್ದು ಯಾಕೆ? ಎಂಎಲ್‌ಸಿ ಹೇಮಲತಾ ನಾಯಕ ಅವರು ಊರಲ್ಲಿ ಇರಲಿಲ್ಲವೇ? ಮೊದಲೇ ಪ್ರಶ್ನೆ ಮಾಡುವುದನ್ನು ಬಿಟ್ಟು, ನಿರ್ಮಾಣವಾದ ಮೇಲೆ ಪ್ರಶ್ನೆ ಮಾಡಿ, ಪ್ರತಿಭಟನೆ ಮಾಡಿದ್ದು ಯಾಕೆ ಎಂದು ಸಂಸದ ರಾಜಶೇಖರ ಹಿಟ್ನಾಳ ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ.
ಅಷ್ಟಕ್ಕೂ ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡುತ್ತಿದ್ದರೆ ಅವರು ಹೋಗಿ ಜಿಲ್ಲಾಡಳಿತಕ್ಕೆ ದೂರು ಕೊಟ್ಟಿದ್ದರೂ ಆಗುತ್ತಿತ್ತು. ಆದರೆ, ಹಾಗೆ ಮಾಡದೆ ಪ್ರತಿಭಟನೆ ಮಾಡಿದ್ದಾರೆ. ರಸ್ತೆ ನಿರ್ಮಾಣ ಮಾಡುವುದನ್ನು ಇವರು ನೋಡಿರಲಿಲ್ಲವೇ? ಆಗ ಎಲ್ಲಿ ಹೋಗಿದ್ದರು? ಮಲಗಿದ್ದರೆ? ಅಥವಾ ಇಂಗ್ಲೆಂಡ್, ಅಮೆರಿಕಕ್ಕೆ ಹೋಗಿದ್ದರೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ ನೀಡಲು ಬಂದಾಗ ಪಕ್ಕದಲ್ಲಿಯೇ ಇದ್ದಿದ್ದರಿಂದ ಮನವಿ ಸ್ವೀಕಾರ ಮಾಡಿದ್ದೇನೆ, ಅದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದರು.