ರಾಮನಗರ: ಬೇಸಿಗೆಯ ರಜೆ ಮುಗಿದಿದೆ. ಇಷ್ಟು ದಿನ ಆಟ-ತುಂಟಾಟಗಳಿಂದ ಹೆತ್ತವರನ್ನು ಸುಸ್ತಾಗಿಸಿದ್ದ ಚಿಣ್ಣರು ಶುಕ್ರವಾರದಿಂದ ಹೆಗಲಿಗೆ ಪಾಟಿ ಚೀಲ ಜೋತು ಹಾಕಿಕೊಂಡು, ಭಾರವಾದ ಹೆಜ್ಜೆಗಳೊಂದಿಗೆ ಶಾಲೆಗಳತ್ತ ತೆರಳಬೇಕಿದೆ. ಇದಕ್ಕೆಂದೇ ಮಕ್ಕಳು, ಹೆತ್ತವರು ಸಿದ್ಧತೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಶಾಲಾ ಆರಂಭದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಹಾಗೂ ಆಯಾ ಶಾಲೆಗಳ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ.
ಅದರಂತೆ ಈಗಾಗಲೇ ಶಾಲೆ ಪ್ರಾರಂಭ ಪೂರ್ವ ತಯಾರಿ ಮತ್ತು ಪ್ರಾರಂಭೋತ್ಸವದ ಪೂರ್ವ ಸಿದ್ಧತೆಗಳು ಅಂತಿಮ ಹಂತ ತಲುಪಿದೆ. ಮೇ 31ರ ದಿನವನ್ನು ಶಾಲಾ ಆರಂಭೋತ್ಸವ ದಿನವನ್ನಾಗಿ ಗುರುತಿಸಿ ಆಚರಿಸಲಾಗುತ್ತಿದೆ. ಇದು ಮಕ್ಕಳ ಪಾಲಿಗೆ ಸಂಭ್ರಮ ಸಡಗರದ ದಿನವಾಗಲಿದೆ.ತಳಿರು-ತೋರಣ:
ಈ ವೇಳೆ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಮಕ್ಕಳನ್ನು ಬ್ಯಾಂಡ್ ವಾದ್ಯಗಳ ನಿನಾದದ ಮೂಲಕ ಶಾಲೆ ತನಕ ಮೆರವಣಿಗೆಯಲ್ಲಿ ಕರೆ ತಂದು ಸ್ವಾಗತಿಸಿ ಸಂಭ್ರಮಿಸಲಾಗುತ್ತದೆ. ಅಲ್ಲಿ ಮಕ್ಕಳಿಗೆ ಸಿಹಿತಿಂಡಿ ಹಂಚಿ ಖುಷಿ ಪಡಲಾಗುತ್ತದೆ. ಮಧ್ಯಾಹ್ನ ಊಟಕ್ಕೆ ಸಿಹಿಯೊಂದಿಗೆ ಬಿಸಿಯೂಟ ಮತ್ತಷ್ಟು ಖುಷಿ ನೀಡಲಿದೆ. ಪ್ರಾರಂಭೊತ್ಸವದ ಈ ಸಂಭ್ರಮದಲ್ಲಿ ಮಕ್ಕಳ ಹೆತ್ತವರು, ಶಾಲಾ ಶಿಕ್ಷಕರು ಪಾಲುದಾರರಾಗಿ, ಮಕ್ಕಳ ಈ ಹಬ್ಬದ ರಂಗು ಹೆಚ್ಚಿಸಲಿದ್ದಾರೆ.ಶಾಲೆ ಪ್ರಾರಂಭದ ದಿನ ಮಕ್ಕಳೆಲ್ಲರೂ ಹೊಸ ಉಡುಗೆಯುಟ್ಟು ಶಾಲೆಗೆ ಬರುತ್ತಾರೆ. ಹೀಗೆ ಬರುವ ಮಕ್ಕಳು ಸಹಪಾಠಿಗಳ ಜತೆ ತಾವುಟ್ಟ ಬಟ್ಟೆಯ, ರಜೆಯಲ್ಲಿ ಕಳೆದ ದಿನಗಳ ರಸಾನುಭವಗಳ ಕುರಿತು ಪರಸ್ಪರ ಹರಟೆ ಹೊಡೆಯುವರು. ಹೊಸ ತರಗತಿಯಲ್ಲಿ ಹಳೆ- ಹೊಸ ಗೆಳೆಯರ ಸಾಂಗತ್ಯ ಬೆಳೆಸಿ ಅವರ ಜತೆ ಸೇರಿ ಸಂಭ್ರಮಿಸುವುದೇ ಮಕ್ಕಳ ಪಾಲಿಗೆ ಹಬ್ಬದ ವಾತಾವರಣ.
ಕಲಿಕೆಗೆ ಸಿದ್ಧತೆ :ವರ್ಷವಿಡಿ ಇನ್ನು ಪಾಟಿ ಚೀಲ ಹೊತ್ತು ಶಾಲೆಗೆ ತೆರಳಬೇಕು. ತರಗತಿ ಕೊಠಡಿ ಒಳಗೆ ಕುಳಿತು ಓದು- ಪಾಠ- ಅಭ್ಯಾಸದಲ್ಲಿ ತೊಡಗಬೇಕು. ಅದಕ್ಕೆಂದೆ ಮುಂದಿನ ಶ್ಯಕ್ಷಣಿಕ ವರ್ಷಕ್ಕೆ ಬೇಕಿರುವ ಸಾಮಾಗ್ರಿಗಳ ಕುರಿತು ಹೆತ್ತವರು ಶಿಕ್ಷಕರು ಸಿದ್ಧತೆ ನಡೆಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿನ ಚಟುವಟಿಕೆಗಳ ಕುರಿತು ಮಕ್ಕಳಿಗೆ ತಿಳಿಹೇಳಲಾಗುತ್ತದೆ.
ಪಠ್ಯಪುಸ್ತಕ - ಸಮವಸ್ತ್ರ ವಿತರಣೆ:ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ವಿತರಣೆಗೆ ಇರುವ ಶೇ. 90ರಷ್ಟು ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರಗಳು ಶಾಲೆಗಳಿಗೆ ತಲುಪಿವೆ. ಪ್ರಾರಂಭೋತ್ಸವದ ದಿನ ಮಕ್ಕಳಿಗೆ ಅವುಗಳನ್ನು ವಿತರಿಸಲಾಗುತ್ತದೆ. ಉಳಿದಂತೆ ಶೂ ಹಾಗೂ ಸಮವಸ್ತ್ರಗಳು ಇನ್ನು ಬರಬೇಕಾಗಿದೆ.
ಪೋಷಕರು ತಮ್ಮ ಮಕ್ಕಳಿಗೆ ಪುಸ್ತಕ, ಕೊಡೆ, ಇತ್ಯಾದಿ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸಿ ಸಂಗ್ರಹಿಸಿ ಸಿದ್ಧತೆ ನಡೆಸಿದ್ದಾರೆ. ಮಕ್ಕಳನ್ನು ಶಾಲೆ ಹಾಗೂ ಹಾಸ್ಟೇಲ್ ಗಳಲ್ಲಿ ದಾಖಲಾತಿಗಾಗಿ ಹೆತ್ತವರು ಮಕ್ಕಳ ಜತೆ ಓಡಾಡುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಿವೆ. ಇನ್ನು ಶಿಕ್ಷಕರು ಶಾಲಾ ಪರಿಸರ ಸ್ವಚ್ಛತೆಗೊಳಿಸಿ ಮಕ್ಕಳ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ. ಪ್ರಾರಂಭೋತ್ಸವ ದಿನವನ್ನು ಶಿಕ್ಷಕರ ಸಹಕಾರದಿಂದ ಹಬ್ಬದ ರೀತಿಯಲ್ಲಿ ನಡೆಸಲು ಶಾಲಾಭಿವೃದ್ಧಿ ಸಮಿತಿಗಳೂ ಕೈಜೋಡಿಸಿವೆ.ಜನಪ್ರತಿನಿಧಿಗಳಿಗಿಲ್ಲ ಆಹ್ವಾನ:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಈ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸದಂತೆ ಶಿಕ್ಷಣ ಇಲಾಖೆ ಎಲ್ಲ ಸರ್ಕಾರಿ ಶಾಲೆಗಳಿಗೆ ಸೂಚನೆ ನೀಡಿದೆ. ಹೀಗಾಗಿ ಜನಪ್ರತಿನಿಧಿಗಳು ಶಾಲಾ ಪ್ರಾರಂಬೋತ್ಸವದಲ್ಲಿ ಪಾಲ್ಗೊಳ್ಳುವಂತಿಲ್ಲ.ಬಾಕ್ಸ್ ...............
ಸ್ಥಳೀಯ ಮಕ್ಕಳನ್ನು ಶಾಲೆಗೆ ದಾಖಲಿಸುವ ಕಾರ್ಯಕ್ರಮ:ಪ್ರತಿ ಸರ್ಕಾರಿ ಶಾಲೆಗೆ ಹೊಂದಿಕೊಂಡಿರುವ ಪ್ರದೇಶಗಳ ಹಾಗೂ ಅಕ್ಕ ಪಕ್ಕದ ಪ್ರದೇಶಗಳ 6-14 ರ ವಯೋಮಾನದ ಮಕ್ಕಳು ಹತ್ತಿರದ ಶಾಲೆಗೆ ಸೇರಿರುವುದನ್ನು ಹಾಗೂ ಯಾವುದೇ ಮಗುವೂ ಸಹ ಶಾಲೆಯಿಂದ ಹೊರಗುಳಿದಿಲ್ಲ ಎಂಬ ಅಂಶವನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು ಮಕ್ಕಳ ಜಾಥಾ, ಶಾಲೆ ಬಿಟ್ಟ ಮಕ್ಕಳ ಮನೆ ಭೇಟಿ, ವಲಸೆ ಬಂದಿರುವ ಹಾಗೂ ಅರ್ಹ ವಯಸ್ಸಿನ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು ದಾನಿಗಳ ಹಾಗೂ ಹಳ ವಿದ್ಯಾರ್ಥಿಗಳ ಸಹಾಯದಿಂದ ಬಾಲಕರಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸುವುದು. ಮಳೆಬಿಲ್ಲು ಕಲಿಕಾ ಹಬ್ಬ ಹಾಗೂ ಸಂಭ್ರಮದ ಶನಿವಾರ ಈ ಕಾರ್ಯಕ್ರಮಗಳ ಅನುಭವದ ಆಧಾರದ ಮೇಲೆ ಮಕ್ಕಳನ್ನು, ಪಾಲಕರನ್ನು ಆಕರ್ಷಿಸುವ ಕಾರ್ಯಕ್ರಮಗಳನ್ನು ಶಿಕ್ಷಕರು ಹಮ್ಮಿಕೊಂಡು ಶಾಲೆಯಲ್ಲಿ ದಾಖಲಾತಿ ಹೆಚ್ಚಾಗುವಂತೆ ಕ್ರಿಯಾಯೋಜನೆ ರೂಪಿಸಿಕೊಳ್ಳವುದು. ಸ್ಥಳೀಯ ಮಕ್ಕಳನ್ನು ಶಾಲೆಗೆ ದಾಖಲಿಸುವಂತಹ ಕಾರ್ಯಕ್ರಮಗಳನ್ನು ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಶಾಲಾ ಮೇಲುಸ್ತುವಾರಿ ಅಧಿಕಾರಿಗಳು, ಹಾಜರಾತಿ ಅಧಿಕಾರಿಗಳು, ಆಯಾ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಕೈಗೊಳ್ಳಬೇಕಿದೆ.
ಕೋಟ್ .........ಸರ್ಕಾರಿ ಶಾಲಾ ಸೌಲಭ್ಯಗಳ ವ್ಯಾಪಕ ಪ್ರಚಾರ:
ಶಿಕ್ಷಣದ ಮಹತ್ವದ ಕುರಿತು ವಿಶೇಷವಾಗಿ ಹೆಣ್ಣು ಮಗುವಿನ ಶಿಕ್ಷಣ, ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಉಚಿತ & ಗುಣಮಟ್ಟದ ಶಿಕ್ಷಣ, ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಸರ್ಕಾರಿ ಶಾಲೆಗಳು, ಸಿ.ಎಸ್.ಆರ್ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ ಸರ್ಕಾರಿ ಶಾಲೆಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಹೇಳಿದರು. ಆಯಾಯ ಸರ್ಕಾರಿ ಶಾಲೆಗಳ ವಿಶೇಷತೆಗಳು, ಬೋಧನಾ ಸೌಲಭ್ಯ ಗಣಕಯಂತ್ರ ಶಿಕ್ಷಣ, ಗ್ರಂಥಾಲಯ, ಕ್ರೀಡಾ ಪರಿಕರಗಳು, ಇ-ಕಲಿಕೆ ಸೌಲಭ್ಯಗಳು ಸೇರಿದಂತೆ ಲಭ್ಯವಿರುವ ಸೌಲಭ್ಯಗಳು, ನಿಕಟಪೂರ್ವ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿನ ಸಾಧನೆಗಳು, ಶೈಕ್ಷಣಿಕ, ಕ್ರೀಡೆ, ವಿಜ್ಞಾನ, ಪ್ರತಿಭಾ ಕಾರಂಜಿ, ಸಹಪಠ್ಯ ಚಟುವಟಿಕೆ ಹಾಗೂ ಮತ್ತಿತರ ರಂಗಗಳಲ್ಲಿನ ಸಾಧನೆಗಳು, ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳ ಕುರಿತಾದ ಆಕರ್ಷಕ ಭಿತ್ತಿ ಪತ್ರಗಳನ್ನು ಮತ್ತು ಕರಪತ್ರಗಳನ್ನು ದಾಖಲಾತಿ ಆಂದೋಲನದ ಸಮಯದಲ್ಲಿ ನೀಡುವುದರ ಮೂಲಕ ಪೋಷಕರಿಗೆ ಸ್ಥಳೀಯರಿಗೆ ಮತ್ತು ಸಮುದಾಯಕ್ಕೆ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಪ್ರೇರೇಪಿಸಬೇಕಿದೆ ಎಂದು ತಿಳಿಸಿದ್ದಾರೆ. 29ಕೆಆರ್ ಎಂಎನ್ 1,2.ಜೆಪಿಜಿರಾಮನಗರದ ಗುರುಭವನದಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಇತರೆ ಶೈಕ್ಷಣಿಕ ವಿಷಯಗಳ ಕುರಿತು ಚರ್ಚಿಸಲು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಸಿಆರ್ ಪಿ, ಬಿಆರ್ ಪಿ ಮತ್ತು ಇಸಿಒರವರ ಸಭೆ ನಡೆಯಿತು.------------------------