ಹಾವೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಹಿಡಿದಿದ್ದು, ಮಳೆಯ ನಡುವೆಯೇ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.
ಭಾನುವಾರ ರೊಟ್ಟಿ ಪಂಚಮಿ ಆಚರಿಸಲಾಗುತ್ತಿದ್ದು, ಸೋಮವಾರ ನಾಗರ ಪಂಚಮಿ ನಡೆಯಲಿದೆ. ಪಂಚಮಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿ ನಡೆದಿದ್ದು, ಹಬ್ಬದ ಸಂಭ್ರಮದಲ್ಲಿರುವ ಮಹಿಳೆಯರು ಹಬ್ಬಕ್ಕೆ ಬಟ್ಟೆ, ಪೂಜಾ ಸಾಮಗ್ರಿ, ದಿನಸಿ ಖರೀದಿ ನಡೆಸಿದ್ದಾರೆ.ಈ ಹಬ್ಬದಂದು ಕಲ್ಲುನಾಗರಕ್ಕೆ ಪೂಜೆ ಮಾಡುವುದು ಸಾಮಾನ್ಯ. ಆದರೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸರ್ವಜ್ಞನ ಅಬಲೂರು ಗ್ರಾಮದ ಮನೆಯೊಂದರಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ಹುತ್ತಕೆ ಹಾಲೆರೆದು ಪೂಜೆ ಮಾಡುವುದು ವಿಶೇಷವಾಗಿದೆ. ಅಬಲೂರು ಗ್ರಾಮದ ಗದಿಗೆಯ್ಯ ಕುಡುಪಲಿ ಎಂಬುವರ ಮನೆಯಲ್ಲಿ ಅನೇಕ ವರ್ಷಗಳ ಹಿಂದೆ ಹುತ್ತ ಬೆಳೆಯಲು ಆರಂಭಗೊಂಡಿತ್ತು. ಇಂದಿಗೂ ಈ ಹುತ್ತ ಬೆಳೆಯುತ್ತಿದೆ. ನಾಗರ ಪಂಚಮಿ ಹಬ್ಬ ಬಂತೆಂದರೆ ಈ ಹುತ್ತಕ್ಕೆ ಗ್ರಾಮದ ಜನರೆಲ್ಲ ಬಂದು ಹಾಲೆರೆದು ಪೂಜೆ ಮಾಡುತ್ತಾರೆ. ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳು ವಿಶೇಷ ಭಕ್ತಿಯಿಂದ ಈ ಹುತ್ತದ ಪೂಜೆ ಮಾಡುತ್ತಾರೆ.
ಮನೆಯ ಮುಂಭಾಗದ ಗೋಡೆಯ ಸೂರಿನಿಂದ ಕೆಳಮುಖವಾಗಿ ಬೆಳೆಯುತ್ತಿರುವ ಈ ಹುತ್ತ, ಮನೆಯ ಒಳಭಾಗಕ್ಕೂ ಹಬ್ಬಿದೆ.ಹುತ್ತ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಪಕ್ಕದಲ್ಲೇ ಬೇರೆ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಪ್ರತಿ ವರ್ಷ ನಾಗರ ಪಂಚಮಿ ಸಂದರ್ಭದಲ್ಲಿ ಈ ಮನೆಯ ಎದುರು ಮಹಿಳೆಯರು ಸಾಲುಗಟ್ಟಿ ಹುತ್ತಕ್ಕೆ ಹಾಲು ಎರೆದು ತಮ್ಮ ಭಕ್ತಿ ಸಮರ್ಪಿಸುತ್ತಾರೆ.ಜೋಕಾಲಿ, ಗ್ರಾಮೀಣ ಕ್ರೀಡೆಗಳ ರಂಗು:
ಗ್ರಾಮೀಣ ಭಾಗದಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ, ಜೋಕಾಲಿ ಜೀಕುವುದರ ಜತೆಗೆ ಕೆಲ ಕಸರತ್ತಿನ ಗ್ರಾಮೀಣ ಕ್ರೀಡೆಗಳನ್ನು ಆಡುವುದು ಈ ಹಬ್ಬದ ವಿಶೇಷ. ಹಬ್ಬದ ನಿಮಿತ್ತ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು, ಮಹಿಳೆಯರು ತಮ್ಮದೇ ಆದ ಗ್ರಾಮೀಣ ಕ್ರೀಡೆ ಆಡಿ ಹಬ್ಬಕ್ಕೆ ಮೆರಗು ನೀಡುತ್ತಾರೆ. ಗ್ರಾಮೀಣ ಭಾಗದಲ್ಲಿ ಬಯಲು ಪ್ರದೇಶ, ಆಟದ ಮೈದಾನ, ದೇವಸ್ಥಾನ ಎದುರು ಯುವಕರು ನಿಂಬೆ ಹಣ್ಣು ಎಸೆತ, ಗೋಲಿ ಎಸೆತ, ಕಣ್ಣಿಗೆ ಬಟ್ಟೆ ಕಟ್ಟಿ ಮನೆ ಅಥವಾ ಪ್ರದೇಶ ಗುರುತಿಸುವಂತಹ ಮೋಜಿನ ಕ್ರೀಡೆಗಳೊಂದಿಗೆ ಸಾಹಸ ಕ್ರೀಡೆ ಆಡುವ ಮೂಲಕ ನಾಗರ ಪಂಚಮಿ ಹಬ್ಬ ಸಂಭ್ರಮದಿಂದ ಆಚರಿಸುತ್ತಾರೆ.ಮಕ್ಕಳ ಉಂಡಿ ಹಬ್ಬ:
ನಾಗರ ಪಂಚಮಿ ಹಬ್ಬವನ್ನು ಮೂರು ದಿನಗಳ ಹಬ್ಬವಾಗಿ ಇಲ್ಲಿ ಆಚರಿಸಲಾಗುತ್ತದೆ. ಗಂಡನ ಮನೆಯಿಂದ ತವರಿಗೆ ಬಂದ ಮಹಿಳೆಯರು ಹೊಸ ಸೀರೆಯುಟ್ಟು ಸಡಗರದಿಂದ ಪಂಚಮಿ ಹಬ್ಬ ಆರಿಸುತ್ತಾರೆ. ಮಕ್ಕಳು ಒಣ ಕೊಬ್ಬರಿ ಬಟ್ಟಲು ಆಟ ಆಡುತ್ತಲೇ ಜೋಕಾಲಿ ಆಡಿ ಸಂಭ್ರಮಿಸುತ್ತಾರೆ. ಶೇಂಗಾ ಉಂಡಿ, ಅಂಟಿನ ಉಂಡಿ, ಹಿಟ್ಟಿನ ಉಂಡಿ, ಬೆಲ್ಲದ ಉಂಡಿ, ಎಳ್ಳಿನ ಉಂಡಿ ಹೀಗೆ ವಿವಿಧ ಬಗೆಯ ಉಂಡಿ ಈ ಹಬ್ಬದ ವೈಶಿಷ್ಟ ಖಾದ್ಯವಾಗಿದ್ದು ತಿಂಗಳಗಟ್ಟಲೆ ಈ ಉಂಡಿ ಮಕ್ಕಳ ಕೈಯಲ್ಲಿ ಅಂಟಿಕೊಂಡಿರುತ್ತದೆ. ಹೀಗಾಗಿ ಮಕ್ಕಳ ಬಾಯಲ್ಲಿ ಇದು ಉಂಡಿ ಹಬ್ಬ ಎಂತಲೇ ಕರೆಸಿಕೊಳ್ಳುತ್ತದೆ.