ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಈ ಬಾರಿ ನ.1 ರಂದು 87ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭಮ, ಸಡಗರದೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡ ತಾಯಿ ಭುವನೇಶ್ವರಿಗೆ ಗೌರವಿಸುವಂತಾಗಲು ತಾಲೂಕಾಡಳಿತದ ನೇತೃತ್ವದಲ್ಲಿ ಶುಕ್ರವಾರ ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನಸೌಧ ಸಭಾಭವನದಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಮುಖಂಡರ, ತಾಲೂಕು ಕಸಾಪ, ತಾಲೂಕುಮಟ್ಟ ಅಧಿಕಾರಿಗಳ, ಕನ್ನಡಪರ ಸಂಘಟನೆಗಳ ಸಮ್ಮುಖದಲ್ಲಿ ಸಭೆಯಲ್ಲಿ ನಿರ್ಧರಿಸಲಾಯಿತು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿ ಸಿದ್ಧತೆಗಳ ಕುರಿತು ಚರ್ಚಿಸಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು.ನ.1 ರಂದು ಬೆಳಗ್ಗೆ 8 ಗಂಟೆಗೆ ತಾಲೂಕಿನ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲಾ ಕಾಲೇಜು ಹಾಗೂ ಕಚೇರಿಗಳಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಸಲ್ಲಿಸುವುದು. ಸರಿಯಾಗಿ ಬೆಳಗ್ಗೆ 8.45ಕ್ಕೆ ತಾಲೂಕು ಆಡಳಿತದ ವತಿಯಿಂದ ಸರ್ಕಾರಿ ಕನ್ನಡ ಶಾಲೆ ಮೈದಾನದಲ್ಲಿ ಪಟ್ಟಣದ ಎಲ್ಲ ಶಾಲಾ ಕಾಲೇಜು ಹಾಗೂ ಕನ್ನಡಪರ ಸಂಘಟನೆಗಳ ಹಾಗೂ ಕನ್ನಡಾಭಿಮಾಣಿಗಳ ಸಹಯೋಗದೊಂದಿಗೆ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜಿಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮ ಜರುಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಈ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮಾತನಾಡಿ, ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಸೇರಿದಂತೆ ಇತರೇ ಶರಣರ, ವೀರರ, ಸಂತರ, ಹೋರಾಟಗಾರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮತ್ತ ಪೂರ್ವಭಾವಿ ಸಭೆಗೆ ಸರ್ಕಾರಿ ಅಧಿಕಾರಿಗಳು ಭಾಗವಹಿಸುವುದೇ ಇಲ್ಲ. ಇದರಿಂದ ಸರ್ಕಾರದ ಆಚರಣಗೆ ಅರ್ಥಪೂರ್ಣತೆಗೆ ಗೌರವ ನೀಡದೇ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಇನ್ನುಮುಂದೆ ಹಾಗಾಗದಂತೆ ಯಾರು ಭಾಗವಹಿಸುವುದಿಲ್ಲ. ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಿ ಸೂಕ್ತಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ತಾಲೂಕು ಆಡಳಿತದಿಂದ ಎಲ್ಲ ಸರ್ಕಾರಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಸರಿಯಾಗಿ ಆಹ್ವಾನ ನೀಡುವುದೇ ಇಲ್ಲ. ಅದನ್ನು ಸರಿಪಡಿಸಿ ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿಯವರಿಗೆ ಒತ್ತಾಯಿಸಿದರು.ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿಯವರಿಗೆ ರಾಜ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ನೀಡುವುದು ಹಾಗೂ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ, ಇದೇ ಸಮಯದಲ್ಲಿ ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ಪತ್ರಕರ್ತರಿಗೆ ತಾಲೂಕು ಮಟ್ಟದ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸುವುದು ಮತ್ತು ಸರ್ಕಾರದ ಆದೇಶದಂತೆ ಶೇ.60 ರಷ್ಟು ಎಲ್ಲ ಅಂಗಡಿ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯಗೊಳಿಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಭಿಯಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.ಸಭೆಗೆ ಗೈರಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯ:ಕನ್ನಡ ರಾಜ್ಯೋತ್ಸವವು ಎಲ್ಲ ಜನರಿಗೆ ಅನ್ವಯಿಸುವಂತಹದ್ದಾಗಿದೆ. ಇಂತಹ ಕಾರ್ಯಕ್ರಮಗಳಿಗೆ ರೂಪರೇಷ ತಯಾರಿಸುವ ಸಮಯದಲ್ಲಿ ಪೂರ್ವಭಾವಿ ಸಭೆ ಕರೆದಾಗ ಅನೇಕ ಅಧಿಕಾರಿ ವರ್ಗದವರು ಗೈರು ಉಳಿಯುತ್ತ ಸಾಗಿದ್ದಾರೆ. ಅಂತಹ ಅಧಿಕಾರಿಗಳ ನೋಟಿಸ್ ನೀಡುವುದರೊಂದಿಗೆ ಅವರ ಮೇಲೆ ಶಿಸ್ತುಕ್ರಮ ಜರುಗಿಸಲು ಮೇಲಾಧಿಕಾರಿಗಳು ವರದಿ ಸಲ್ಲಿಸಬೇಕೆಂದು ಕನ್ನಡ ಪರ ಸಂಘಟಿಕರು ಅಲ್ಲದೇ ಕನ್ನಡಾಭಿಮಾನಿಗಳು ಇದೇ ಸಮಯದಲ್ಲಿ ಒತ್ತಾಯಿಸಿದ ಘಟನೆ ನಡೆಯಿತು.ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪಿಎಸೈ ಮನ್ನಾಬಾಯಿ, ಕೃಷಿ ಇಲಾಖೆ ತಾಲೂಕು ಅಧಿಕಾರಿ ಸುರೇಶ ಭಾವಿಕಟ್ಟಿ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಯು.ಜಿ.ಮಾಟೂರ, ಕನ್ನಡ ಪರಸಂಘಟನೆಗಳ ಮುಖಂಡರಾದ ರಾಜುಗೌಡ ತುಂಬಗಿ, ಹುಸೇನ್ ಮುಲ್ಲಾ, ಸಂಗಯ್ಯ ಸಾರಂಗಮಠ, ಪ್ರಕಾಶ ಸರೂರ, ದೇವರಾಜ ಹಂಗರಗಿ, ಉದಯ ರಾಯಚೂರ, ಸೇರಿದಂತೆ ಹಳವರು ಇದ್ದರು.