ಕನ್ನಡಪ್ರಭ ವಾರ್ತೆ ಜಗಳೂರು
ಇಂದು ನಡೆಯಲಿರುವ ೨ನೇ ಹಂತದ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆಗೆ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಗಳೂರು ವಿಧಾನಸಭಾಕ್ಷೇತ್ರದ ಚುನಾವಣಾಧಿಕಾರಿ ಸಿದ್ರಾಮ ವೈ ಮಾರಿಹಾಳ ತಿಳಿಸಿದರು.ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಳೂರು ಕ್ಷೇತ್ರದಾದ್ಯಂತ ೨೬೩ ಮತ ಕೇಂದ್ರ ಸ್ಥಾಪಿಸಲಾಗಿದೆ. ಅದರಲ್ಲಿ ೨೦೫ ಜಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುತ್ತವೆ. ಉಳಿದಂತೆ ೬೮ ಕೇಂದ್ರಗಳು ಅರಸೀಕೆರೆ ವ್ಯಾಪ್ತಿಗೆ ಬರುತ್ತವೆ. ಮತ ಕೇಂದ್ರಕ್ಕೆ ತೆರಳುವ ಸಿಬ್ಬಂದಿಗೆ ತಾಲೂಕು ಆಡಳಿತದಿಂದ ನಿಗದಿ ಪಡಿಸಿದ ಇವಿಎಂ, ವಿವಿಪ್ಯಾಟ್ ಮತ ಯಂತ್ರ ವಿತರಣೆ ಮಾಡಿ ಬಸ್‌ಗಳ ಮೂಲಕ ಆಯಾ ಪೊಲಿಂಗ್ ಸ್ಟೇಷಗ್‌ಗಳಿಗೆ ಕಳುಹಿಸಲಾಗಿದೆ.
೫ ವಿವಿಧ ಮಾದರಿಯಲ್ಲಿ ೯ ವಿಶೇಷ ಮತಗಟ್ಟೆ ಸ್ಥಾಪನೆಗೆ ಈಗಾಗಲೇ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಿಳಾ ನಿರ್ವಹಣೆ ಮತಗಟ್ಟೆ (ಸಖಿ), ವಿಶೇಷ ಚೇತನರ ನಿರ್ವಹಣೆ ಮತಗಟ್ಟೆ, ಯುವಜನ ನಿರ್ವಹಣೆ ಮತಗಟ್ಟೆ, ಧ್ಯೇಯ ಆಧಾರಿತ ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು. ೫ ಪಿಂಕ್ ಮತಗಟ್ಟೆಗಳ ವಿಶೇಷತೆ ಏನೆಂದರೆ ಅಲ್ಲಿ ಅಧಿಕಾರಿಗಳು ಸಹ ಮಹಿಳೆಯರಾಗಿರುತ್ತಾರೆ.ಕ್ಷೇತ್ರದ ೨೬೩ ಮತಗಟ್ಟೆಗಳಿಗೆ ತೆರಳಿದ ಎಲ್ಲ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ಎಲ್ಲ ಕೇಂದ್ರಗಳಲ್ಲೂ ವ್ಯವಸ್ಥೆ ಮಾಡಲಾಗಿದೆ ಎಂದರು.
ಪೊಲೀಸ್ ನಿಯೋಜನೆ:ಪ್ರತಿಯೊಂದು ಪೊಲಿಂಗ್ ಕೇಂದ್ರಗಳಿಗೂ ಒಬ್ಬೊಬ್ಬ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಕ್ಷೇತ್ರದಲ್ಲಿ ೫೦ ಮತ ಕೇಂದ್ರಗಳನ್ನೂ ಸೂಕ್ಷ್ಮ ಮತ ಕೇಂದ್ರಗಳೆಂದು ಗುರುತಿಸಲಾಗಿದೆ. ಅಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಶಾಂತಿಯುತ, ನ್ಯಾಯ ಸಮ್ಮತ ಮತದಾನ ನಡೆಯಲು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಭದ್ರತಾ ವ್ಯವಸ್ಥೆಯನ್ನು ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. --------
ಜಗಳೂರು ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಮೈದಾನದ ಸ್ಟ್ರಾಂಗ್ ರೂಂಗಳಿಂದ ಇವಿಎಂ ಮತಯಂತ್ರ ತೆಗೆದುಕೊಂಡು ಹೊರಟ ಸಿಬ್ಬಂದಿ ದೃಶ್ಯ