ಹುಬ್ಬಳ್ಳಿ:
ಪ್ರಮುಖ ದೇವಸ್ಥಾನ ಹಾಗೂ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಸಾಂಪ್ರದಾಯಿಕ ಆಚರಣೆ ಜತೆಗೆ ನಗರದಲ್ಲಿ ಗರ್ಭಾ ಹಾಗೂ ದಾಂಡಿಯಾ ನೈಟ್ಸ್ ಕಾರ್ಯಕ್ರಮಗಳ ಆಯೋಜನೆ ಜೋರಾಗಿದೆ. ಕಲ್ಯಾಣ ನಗರದ ವಿವೇಕಾನಂದ ಆಶ್ರಮ, ದಾಜೀಬಾನ ಪೇಟ ದುರ್ಗಾದೇವಿ, ತುಳಜಾಭವಾನಿ ದೇವಸ್ಥಾನ, ದೇಶಪಾಂಡೆ ನಗರದ ಕಾಮಾಕ್ಷಿ ದೇವಸ್ಥಾನ ಸೇರಿದಂತೆ ಬಹುತೇಕ ಮಂದಿರಗಳಲ್ಲಿ ನವರಾತ್ರಿ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.
ದೇವಸ್ಥಾನ ಶುಚಿಗೊಳಿಸಿ ವಿದ್ಯುತ್ ದೀಪ ಹಾಗೂ ಹೂವುಗಳಿಂದ ಅಲಂಕರಿಸಲಾಗಿದೆ. ಒಂಬತ್ತು ದಿನವೂ ದೇವಿಯರಿಗೆ ವಿಶೇಷ ಪೂಜೆ, ಪುನಸ್ಕಾರ, ಹೋಮ, ಹವನ, ಪ್ರವಚನ ಹಾಗೂ ಮಹಾಮಂಗಳಾರತಿ ಹಾಗೂ ಅನ್ನ ಪ್ರಸಾದ ಏರ್ಪಡಿಸಲಾಗಿದೆ. ಇನ್ನು ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾದೇವಿ ಬೃಹತ್ ಮೂರ್ತಿಗಳ ಮೆರವಣಿಗೆ ಭವ್ಯವಾಗಿ ನಡೆಯಿತು. ಸುಮಂಗಲೆಯರು ಕೋಲಾಟ ಆಡುವ ಮೂಲಕ ಸಂಭ್ರಮಿಸಿದರು. ವಿವಿಧ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ತಂದವುಮಾರುಕಟ್ಟೆ ಖರೀದಿ ಜೋರು:
ದುರ್ಗಾಮಾತೆ ಆರಾಧನೆ, ಉಪವಾಸ ಹಾಗೂ ವ್ರತಗಳು, ದೇವಿಯ ನವರೂಪಗಳಿಗೆ ಪೂಜೆ, ಬೊಂಬೆ ಕೂರಿಸುವ ಸಂಪ್ರದಾಯ, ಕೋಲಾಟ ಇವೆಲ್ಲವೂ ಹಬ್ಬದ ಸಂಭ್ರಮ ಹೆಚ್ಚಿಸಲಿವೆ. ಮನೆಗಳಲ್ಲಿ ವಿವಿಧ ಬಗೆಯ ಬೊಂಬೆಗಳನ್ನು ಅಲಂಕರಿಸಿ, ಮೆಟ್ಟಿಲುಗಳ ಮೇಲೆ ಸುಂದರವಾಗಿ ಜೋಡಿಸಿ ಪೂಜಿಸಲಾಗುತ್ತದೆ.