ಕೊರೋನಾ ಎದುರಿಸಲು ಸಕಲ ಸಿದ್ಧತೆ: ಸಿಎಂ

KannadaprabhaNewsNetwork |  
Published : May 28, 2025, 12:34 AM IST
ಸಿದ್ದರಾಮಯ್ಯ  | Kannada Prabha

ಸಾರಾಂಶ

ರಾಜ್ಯದಲ್ಲಿ ಸದ್ಯಕ್ಕೆ ಕೊರೋನಾದಿಂದ ಯಾವುದೇ ಭಯವಿಲ್ಲ. ಆದರೂ, ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌, ಆಮ್ಲಜನಕ, ವಾರ್ಡ್‌ಗಳ ಲಭ್ಯತೆಗಳನ್ನು ಪರಿಶೀಲಿಸಿ, ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಸದ್ಯಕ್ಕೆ ಕೊರೋನಾದಿಂದ ಯಾವುದೇ ಭಯವಿಲ್ಲ. ಆದರೂ, ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌, ಆಮ್ಲಜನಕ, ವಾರ್ಡ್‌ಗಳ ಲಭ್ಯತೆಗಳನ್ನು ಪರಿಶೀಲಿಸಿ, ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಸಂಬಂಧ ಸೋಮವಾರ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದೇನೆ. ಎಲ್ಲದಕ್ಕೂ ಸಿದ್ಧರಾಗಿರುವಂತೆ ತಿಳಿಸಿದ್ದೇನೆ. ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ. ಎಲ್ಲರೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿಲ್ಲ. ಆದರೆ, ವೃದ್ಧರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ತಿಳಿಸಲಾಗಿದೆ. ಸದ್ಯ ಕಾಣಿಸಿಕೊಂಡಿರುವ ಕೊರೋನಾ ತಳಿ ಗಂಭೀರವಾದುದಲ್ಲ. ಆದರೂ, ನೆಗಡಿ, ಕೆಮ್ಮು, ಜ್ವರ ಬಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದರು.ವೈದ್ಯರು ಮಾಸ್ಕ್‌ ಧರಿಸಿ: ಶರಣ

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವೆಂಟಿಲೇಟರ್‌, ಆಕ್ಸಿಜನ್‌ ಸೇರಿ ಇತರೆ ಲಭ್ಯತೆ ಕುರಿತು ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಸೂಚನೆ ನೀಡಿದ್ದಾರೆ.ಮಂಗಳವಾರ ವಿಕಾಸೌಧದಲ್ಲಿ ಕೋವಿಡ್‌ ಮುನ್ನಚ್ಚರಿಕಾ ಕ್ರಮಗಳ ಕುರಿತು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು, ಇಲಾಖೆ ವ್ಯಾಪ್ತಿಯ ವೈದ್ಯರು, ಆರೋಗ್ಯ ಸಿಬ್ಬಂದಿ ಮಾಸ್ಕ್‌ ಧರಿಸಬೇಕು ಎಂದು ನಿರ್ದೇಶನ ನೀಡಿದರು.ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ, ಜನತೆ ಯಾವುದೇ ರೀತಿಯಲ್ಲೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಜನನಿಬಿಡ ಸ್ಥಳಗಳಲ್ಲಿ ಜ್ವರ, ಶೀತ, ಕೆಮ್ಮ ಇರುವವರು ಮಾಸ್ಕ್‌ ಧರಿಸಬೇಕು. ಅಲ್ಲದೆ ಗರ್ಭಿಣಿಯರೂ ಮಾಸ್ಕ್ ಬಳಕೆ ಮಾಡಬೇಕು. ಜನರು ಸರ್ಕಾರದೊಂದಿಗೆ ಕೈ ಜೋಡಿಸಿ ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಸಾರಿ ಪ್ರಕರಣಗಳ ಪರೀಕ್ಷೆ ನಡೆಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ಆಸ್ಪತ್ರೆ ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದೆ. ಪ್ರಯೋಗಾಲಯಗಳ ವ್ಯವಸ್ಥೆ, ಆಕ್ಸಿಜನ್‌ ಹಾಸಿಗೆ, ವೆಂಟಿಲೇಟರ್‌ಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಬೇಸಿಗೆ ರಜೆ ಬಳಿಕ ಶಾಲೆಗಳು ಪ್ರಾರಂಭವಾಗಿವೆ. ವಿದ್ಯಾರ್ಥಿಗಳಿಗೆ ಜ್ವರ, ಶೀತ, ಕೆಮ್ಮು ಇದ್ದರೆ ಪೋಷಕರು ಶಾಲೆಗಳಿಗೆ ಕಳುಹಿಸಿಬಾರದು. ಒಂದು ವೇಳೆ ಶಾಲೆಯಲ್ಲಿ ಶೀತ, ನೆಗಡಿ ಬಂದರೆ ತಕ್ಷಣವೇ ಪೋಷಕರಿಗೆ ಕರೆ ಮಾಡಿ ಕಳುಹಿಸಬೇಕು ಎಂದರು.ಸಭೆಯಲ್ಲಿ ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಷಿನ್, ವೈದ್ಯಕೀಯ ಶಿಕ್ಷಣದ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಇತರರು ಉಪಸ್ಥಿತರಿದ್ದರು.

-ಬಾಕ್ಸ್‌-ಮಾಸ್ಕ್ ಕಡ್ಡಾಯ ಸದ್ಯಕ್ಕೆ ಇಲ್ಲ

ಕೊರೊನಾ ಪ್ರಕರಣಗಳಿದ್ದರೂ ಸದ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.ಜ್ವರ, ಶೀತ, ನೆಗಡಿ ಇದ್ದವರು ಮಾಸ್ಕ್‌ ಧರಿಸಿದರೆ ಸಾಕು. ಸರ್ಕಾರ ಉತ್ತಮವಾಗಿ ಮೇಲ್ವಿಚಾರಣೆ ಮಾಡಲಿದೆ. ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಹವಾಮಾನ ಕೂಡ ಬದಲಾವಣೆಯಾಗುತ್ತಿದೆ. ಇದರಿಂದಲೂ ಜ್ವರ, ನೆಗಡಿ, ಕೆಮ್ಮು ಬರುತ್ತಿದೆ. ಕೋವಿಡ್ ಪ್ರಕರಣ ಬೆಂಗಳೂರಿನಲ್ಲಿ ಜಾಸ್ತಿಯಾಗಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಹರಡುತ್ತಿಲ್ಲ. ಜನತೆ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ರಾಜ್ಯದಲ್ಲಿ ಲಸಿಕೆಗಳಿದ್ದು, ಅಗತ್ಯ ಬಿದ್ದರೆ ಕೇಂದ್ರದ ಜತೆ ಚರ್ಚಿಸಿ ಲಸಿಕೆಗಳನ್ನು ತರಿಸಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ