ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹೋರಾಟದಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಾಣಬಹುದು ಎಂದು ದಲಿತ ಮುಖಂಡ ಸಿ.ಎಂ.ಕೃಷ್ಣಮೂರ್ತಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಆಯೋಜಿಸಿರುವ ಕನ್ನಡ ರಾಜ್ಯೋತ್ಸವದ 10ನೇ ದಿನದ ಕಾರ್ಯಕ್ರಮದಲ್ಲಿ ಕನ್ನಡ ಚಳವಳಿಗಾರ ಹ.ವಿ.ನಟರಾಜು, ಗು.ಪುರುಷೋತ್ತಮ ಅವರ ಕನ್ನಡಪರ ಹೋರಾಟ ಕುರಿತು ಮಾತನಾಡಿದರು. ಸರ್ಕಾರಗಳು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಿಲ್ಲ. ತಮ್ಮಿಂದ ಮತಗಳನ್ನು ಪಡೆದು ಚುನಾಯಿತ ಜನಪ್ರತಿನಿಧಿಗಳು ನಮ್ಮ ಮಾತು ಕೇಳುವುದಿಲ್ಲ. ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡಿದಾಗಲೇ ಸರ್ಕಾರಗಳು ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಕನ್ನಡ ನಾಡು, ನುಡಿ, ಭಾಷೆ ವಿಚಾರದಲ್ಲೇ ಹೋರಾಟಗಾರರು ಬೀದಿಗೆ ಬಂದಾಗಲೇ ಸರ್ಕಾರಗಳು ಕಣ್ಣು ತೆರೆಯುತ್ತವೆ. ಇಲ್ಲ ಅಂದರೆ ಯಾವುದೇ ಸರ್ಕಾರ, ಯಾವುದೇ ಪಕ್ಷ ಇರಲಿ ಎಲ್ಲರೂ ಒಂದೇ. ಹಾಗಾಗಿ ಹೋರಾಟಗಾರರದ್ದೇ ಒಂದು ಪಕ್ಷ ಒಂದು ಜಾತಿಯಾಗಿದೆ ಎಂದರು.ಕನ್ನಡ ಹೋರಾಟಗಾರರನ್ನು ಸ್ಮರಣೆ ಮಾಡುವ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದದ್ದು, ಹ.ವಿ.ನಟರಾಜು, ಗು.ಪುರುಷೋತ್ತಮ್, ಸಾವಿರಾರು ಕನ್ನಡ ಹೋರಾಟ ಮಾಡಿದ್ದಾರೆ. ಹ.ವಿ.ನಟರಾಜು ಪ್ರತಿ ಹೋರಾಟದಲ್ಲೂ ಕೊಡುಗೈ ದಾನಿಯಾಗಿದ್ದರು. ನಾನು ಗು.ಪುರುಷೋತ್ತಮ ಒಡನಾಡಿ. ಹೋರಾಟದಲ್ಲಿ ಅವರು ಎಂದಿಗೂ ಅಜರಾಮರ ಎಂದರು.ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾಗಿತ್ತು:
ಕನ್ನಡ ಹೋರಾಟಗಾರ ಶಾ.ಮುರುಳಿ ಮಾತನಾಡಿ, ಕನ್ನಡ ಪರ ಹೋರಾಟಗಾರದ ಹ.ವಿ.ನಟರಾಜು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾಗಿತ್ತು. ಕನ್ನಡ ಚಳವಳಿಗಾರರನ್ನು ಸರ್ಕಾರ ಗುರುತಿಸಬೇಕು. ಅವರ ಮೇಲೆ ಪೊಲೀಸ್, ರಾಜ್ಯ ಗುಪ್ತಚರ ಇಲಾಖೆ, ರಾಷ್ಟ್ರೀಯ ಗುಪ್ತಚರ ಇಲಾಖೆ ವರದಿ ಪಡೆದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಆಗಬೇಕು. ಅರ್ಜಿ ಹಾಕಿಕೊಂಡು ರಾಜ್ಯೋತ್ಸವ ಪ್ರಶಸ್ತಿ ಪಡೆಯಬೇಕೋ? ಸರ್ಕಾರ ಸ್ವಂತ ಇಚ್ಛೆಯಿಂದ ನೀಡಿದರೆ ಸ್ವೀಕರಿಸಬಹುದು ಆಗ ಪ್ರಶಸ್ತಿ ಪಡೆದ ತೃಪ್ತಿ ಇರುತ್ತದೆ ಎಂದರು.ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ನಗರಸಭಾ ಮಾಜಿ ಅಧ್ಯಕ್ಷ ಮಹದೇವನಾಯಕ, ತಮಿಳು ಸಂಘದ ಜಗದೀಶ್, ಹ.ವಿ.ನಟರಾಜು ಪುತ್ರ ಮೋಹನ್ ಕುಮಾರ್, ವಿಶ್ವಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಜಧ್ವನಿ ಗೋವಿಂದರಾಜು, ನಂಜುಂಡಶೆಟ್ಟಿ, ಪಣ್ಯದಹುಂಡಿ ರಾಜು, ರಾಚಪ್ಪ,ಶಿವಲಿಂಗಮೂರ್ತಿ, ಬಸವರಾಜು ನಾಯಕ, ಮುತ್ತುರಾಜು, ಆಟೋ ಲಿಂಗರಾಜು, ಆಟೋ ಶಂಕರ್, ಮಹೇಶ್, ಅಭಿ, ಗಡಿ ಯಜಮಾನ ಮಹದೇವಶೆಟ್ಟಿ, ಜಯಣ್ಣ, ಮಲ್ಲಿಕಾರ್ಜುನ, ನಾಗೇಶ್, ಪ್ರದೀಪ್, ಮೋಹನ್ ಹಾಜರಿದ್ದರು.