ಹಲಗೂರು: ಪ್ರಸ್ತುತ ಅಂಗೈನಲ್ಲಿರುವ ಜ್ಞಾನವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಬಳಸಿದಾಗ ಮಾತ್ರ ವಿದ್ಯಾರ್ಥಿಗಳು ಎತ್ತರದ ಸ್ಥಾನಕ್ಕೆ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಕೃಷ್ಣೇಗೌಡ ತಿಳಿಸಿದರು.
ಇಂದು ಕಾಲ ಸಾಕಷ್ಟು ಬದಲಾಗಿದೆ. ವೈಜ್ಞಾನಿಕವಾಗಿ ಸಾಕಷ್ಟು ಬೆಳೆದಿದ್ದೇವೆ. ಕ್ಷಣಾರ್ಧದಲ್ಲೇ ಎಲ್ಲಾ ಮಾಹಿತಿಗಳು ನಮ್ಮ ಅಂಗೈಯಲ್ಲಿರುವ ಮೊಬೈಲ್ ನಲ್ಲಿ ಸಿಗುತ್ತವೆ. ನಾವು ಈಗ ಸ್ಮಾರ್ಟ್ ಜಗತ್ತಿನಲ್ಲಿದ್ದೇವೆ. ಆದರೆ, ನಾವು ಮಾತ್ರ ಸ್ಮಾರ್ಟ್ ಆಗಿಲ್ಲ ಎಂದರು.
500 ವರ್ಷಗಳ ಹಿಂದೆ ಸರ್ವಜ್ಞ ಕವಿ ವಿದ್ಯೆ ಇರುವವನ ಮೊಗವು ಮುತ್ತಿನಂತೆ, ವಿದ್ಯೆ ಇಲ್ಲದವನ ಮೊಗವು ಹಾಳೂರ ಕೊಂಪೆಯಂತೆ ಎಂದು ಹೇಳುವ ಮೂಲಕ ವಿದ್ಯೆ ಮಹತ್ವವನ್ನು ತಿಳಿಸಿದ್ದಾರೆ. ವಿದ್ಯೆಯಿಂದ ಮಾತ್ರ ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.ಮಳವಳ್ಳಿ ತಾಲೂಕು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳನ್ನು ಹೋಲಿಕೆ ಮಾಡಿ ನೋಡಿದರೆ ಸರ್ಕಾರಿ ಶಾಲೆಗಳ ಮಕ್ಕಳ ಪ್ರತಿಭೆ ಉತ್ತಮವಾಗಿದೆ ಎಂದರು.
ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸುವಾಗ ಶಾಲೆ ಬಿಟ್ಟು ಹೋಗುವುದಕ್ಕೆ ಹಾಗೂ ಶಿಕ್ಷಕರು ತಮಗೆ ನೀಡಿದ ಶಿಕ್ಷಣ ಮತ್ತು ಮಾಡಿದ ಬೋಧನೆ ವಿವರಿಸಿ ದುಃಖಿತರಾದರು. ಶಿಕ್ಷಕರು ಕೂಡ ಮಕ್ಕಳ ಮಾತು ಕೇಳಿ ಕೆಲಕಾಲ ಮೌನಕ್ಕೆ ಶರಣಾದರು.ಕಾರ್ಯಕ್ರಮದಲ್ಲಿ ಶಿಕ್ಷಕ ಎನ್.ಎಂ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕಿರಣ್, ಬಿ.ಕೆ. ಕರಿಯಪ್ಪ ,ಆನಂದ್, ತ್ಯಾಗರಾಜು, ಜೈ ಶೇಖರ, ವಿನುತಾ, ಸುಮಾ, ದುಂಷ್ಯತ್ ಸೇರಿದಂತೆ ಇತರರು ಇದ್ದರು.