ಕನ್ನಡಪ್ರಭ ವಾರ್ತೆ ಮಳವಳ್ಳಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯನ್ನು ಗೆಲ್ಲಿಸಿದರೇ ಕೇಂದ್ರ ಸಚಿವರಾಗಿ ಮಂಡ್ಯ ಜಿಲ್ಲೆಯ ಸರ್ವೋತ್ತೋಮುಖವಾಗಿ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಅಂಚೇದೊಡ್ಡಿ, ಕಂದೇಗಾಲ, ನಿಡಘಟ್ಟ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚನೆ ಮಾಡಿದ ವೇಳೆ ಮಾತನಾಡಿದರು.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿ ಪ್ರಧಾನಿ ನರೇಂದ್ರಮೋದಿ ಅವರ ಸಚಿವ ಸಂಪುಟದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಕೃಷಿ ಸಚಿವರಾಗಿ ಮಂಡ್ಯ ಜಿಲ್ಲೆಯಲ್ಲಿನ ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಲ್ಲದೇ ಮೇಕೆದಾಟು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕೆಆರ್‌ಎಸ್ ಅಣೆಕಟ್ಟೆಯಲ್ಲಿ 89 ಅಡಿ ನೀರಿದ್ದರೂ ಕೂಡ ರೈತರಿಗೆ ನೀರು ಕೊಡದೇ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲನುಭವಿಗಳಿಗೆ ತಲುಪುತ್ತಿಲ್ಲ. ಜನರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇವಲ ನಾಮಕವಾಸ್ತೆಗೆ ರಾಷ್ಟ್ರಧ್ಯಕ್ಷರನ್ನಾಗಿ ಮಾಡಿದ್ದು, ಅವರನ್ನು ಎಂದಿಗೂ ಪ್ರಧಾನಿ ಮಾಡುವುದಿಲ್ಲ ಎಂದರು.ಎಚ್ .ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತನೂ ಕೂಡ ಕುಮಾರಣ್ಣನವರಿಗೆ ಮತ ಹಾಕುತ್ತೇನೆಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದು, ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆಂದು ಭವಿಷ್ಯ ನುಡಿದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾವುಗಳು ಅವರನ್ನು ಮತಹಾಕಿ ಗೆಲ್ಲಿಸುವುದರ ಮೂಲಕ ಬರಮಾಡಿಕೊಳ್ಳಬೇಕಾಷ್ಟೆ. ಜಿಲ್ಲೆಗೆ ಅದೃಷ್ಟದ ಬಾಗಿಲು ತೆರೆದಿದ್ದು, ರೈತರ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದು ಹೇಳಿದರು.ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರವಿ ಕಂಸಾಗರ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಣ್ಣ ಸ್ಪರ್ಧೆ ಮಾಡಿದ್ದು, ಹೆಚ್ಚಿನ ಮತಗಳನ್ನು ಕೊಟ್ಟು ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಬಡವರ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿರುವ ಎಚ್ಡಿಕೆ ಅವರು ಕೇಂದ್ರದಿದಂದ ಜಿಲ್ಲೆಗೆ ಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ ಹೊರತು ಸರ್ಕಾರದ ಸೌಲಭ್ಯಗಳಿಗೆ ಜನರಿಗೆ ತಲುಪುತ್ತಿಲ್ಲ. ಕೇವಲ ಪ್ರಚಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.ರೈತರು ಹಾಗೂ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಜೆಡಿಎಸ್ ಮುಖಂಡರು ಇದ್ದರು.