ಕನ್ನಡಪ್ರಭ ವಾರ್ತೆ ಕುಷ್ಟಗಿಮಾನವ ಹಕ್ಕುಗಳು ಮನುಷ್ಯನ ಸರ್ವಾಂಗೀಣ ವಿಕಾಸ ಬಯಸುವ ಜಗತ್ತಿನ ಪ್ರತಿಯೊಬ್ಬ ಮನುಷ್ಯನನ್ನು ಘನತೆಯಿಂದ ಬದುಕುವಂತೆ ಮಾಡುವ ಸ್ಪಷ್ಟ ಗುರಿ ಹೊಂದಿದ್ದು, ಅವುಗಳನ್ನು ಅರಿತುಕೊಳ್ಳಬೇಕು ಎಂದು ಡಾ.ಜೀವನಸಾಬ ಬಿನ್ನಾಳ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕು ಕಾನೂನೂ ಸೇವಾ ಸಮಿತಿ ಹಾಗೂ ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವಮಾನವ ಹಕ್ಕುಗಳ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಮಾನವ ಹಕ್ಕುಗಳು ಜನಾಂಗ, ಲಿಂಗ ರಾಷ್ಟ್ರೀಯತೆ, ಭಾಷೆ ,ಧರ್ಮ ಯಾವುದೇ ಇತರೆ ಸ್ಥಾನಮಾನಗಳನ್ನು ಲೆಕ್ಕಿಸದೆ ಎಲ್ಲ ಮಾನವರಿಗೂ ನಿಸರ್ಗ ದತ್ತವಾಗಿ ದೊರೆತು ಎಲ್ಲರಲ್ಲೂ ಅಂತರ್ಗತವಾಗಿರುವ ಹಕ್ಕುಗಳಾಗಿವೆ ಎಂದರು.ಗುಲಾಮಗಿರಿ, ಚಿತ್ರಹಿಂಸೆಯಿಂದ ರಕ್ಷಿಸಿಕೊಳ್ಳುವ ಸುಂದರ ಬದುಕನ್ನು ಕಟ್ಟಿಕೊಳ್ಳುವ, ಸ್ವತಂತ್ರವಾಗಿ ಬದುಕುವ, ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯುವುದರ ಜೊತೆಗೆ ಮಾನವನ ವಿಕಾಸಕ್ಕೆ ಸಾಧ್ಯವಾಗಿಸುವ ಮೂಲ ಉದ್ದೇಶ ಹೊಂದಿವೆ. ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕು ಮತ್ತು ಸ್ವಾತಂತ್ರ್ಯಗಳೇ ಈ ಮಾನವ ಹಕ್ಕುಗಳು. ಇವು ಕಾನೂನಿನ ರಕ್ಷಣೆಯಿಂದ ಮಾನವ ಹಕ್ಕುಗಳು ಬಲವರ್ಧನೆಗೊಳ್ಳಲು ಸಾಧ್ಯ. ರಾಜ್ಯಾಧಿಕಾರದಿಂದ ಮಾನವ ಹಕ್ಕುಗಳು ರಕ್ಷಿತವಾಗುತ್ತವೆ. ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳ ಅರಿವು ಅತ್ಯವಶ್ಯಕವಾಗಿದೆ ಎಂದರು.ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಸರಸ್ವತಿ ದೇವಿ ಮಾತನಾಡಿ, ಮಾನವ ಹಕ್ಕುಗಳನ್ನು ಪ್ರತಿಯೊಬ್ಬರು ಅರಿಯಬೇಕಾದ ಹಕ್ಕುಗಳಾಗಿವೆ. ಮನುಷ್ಯನ ಸುಂದರ ಬದುಕಿಗೆ ಇವು ಕಳಶಪ್ರಾಯವಾದುದು. ಹಕ್ಕುಗಳು ಉಲ್ಲಂಘನೆಯಾದಾಗ ಸಂಬಂಧಿಸಿದ ಕಚೇರಿಗಳಲ್ಲಿ ಪ್ರಕರಣ ದಾಖಲಿಸಲು ಮುಂದಾಗಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸತೀಶ ಮಾತನಾಡಿ, ಮಾನವ ಹಕ್ಕುಗಳು ಮನುಷ್ಯನ ವಿಕಾಸಕ್ಕೆ ದಾರಿದೀಪವಾಗಿದೆ. ಮನುಷ್ಯರು ಪರಸ್ಪರರನ್ನು ಗೌರವಿಸುವುದರ ಮೂಲಕ ಇವುಗಳ ಘನತೆ ಎತ್ತಿ ಹಿಡಿಯಬೇಕಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ವಿಜಯಮಾಂತೇಶ, ಸಿಪಿಐ ಯಶವಂತ್ ಬಿಸನಳ್ಳಿ, ಪಿಎಸ್ಐ ಮುದ್ದುರಂಗಸ್ವಾಮಿ ಮಾತನಾಡಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ ಶ್ರುತಿ ಮಳಪ್ಪಗೌಡರ, ಸರ್ಕಾರಿ ಅಭಿಯೋಜಕ ರಾಯನಗೌಡರ, ಇಂದಿರಾ, ಸುಹಾಸಿನಿ ಪಾಲ್ಗೊಂಡಿದ್ದರು. ಶರಣಪ್ಪ ಗುರಿಕಾರ್ ಕಾರ್ಯಕ್ರಮ ನಿರ್ವಹಿಸಿದರು.