- ಸಚಿವ ಮಹಾದೇವಪ್ಪ ಸಂಪುಟದಿಂದ ಕೈಬಿಡಿ: ದಸಂಸ ಆಗ್ರಹ
ಕನ್ನಡಪ್ರಭ ವಾರ್ತೆ ಹರಿಹರ
ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಛಲವಾದಿ ಜಾತಿಗೆ ಸೇರಿದವರನ್ನೇ ಆಯ್ಕೆ ಆಗುವಂತೆ ನೋಡಿಕೊಂಡಿರುವ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಆಗ್ರಹಿಸಿದ್ದಾರೆ.ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆ 2023, 2024 ಮತ್ತು 2025ನೇ ಸಾಲುಗಳಿಗೆ 15 ಜನರನ್ನು ವಿವಿಧ ಕ್ಷೇತ್ರದ ಸಾಧಕರೆಂದು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಈ 15 ಜನ ಪ್ರಶಸ್ತಿ ಪುರಸ್ಕೃತರು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪನವರ ಜಾತಿಗೆ ಸೇರಿದವರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ಅಂಬೇಡ್ಕರ್ ಪ್ರಶಸ್ತಿಯ ಮೌಲ್ಯವನ್ನು ಇವರೇ ಕಳೆಯುತ್ತಿದ್ದಾರೆ. ಕರ್ನಾಟಕದ ಅಂಬೇಡ್ಕರ್ ಎಂದೆ ಕರೆಯಲ್ಪಡುವ ಪ್ರೊ. ಬಿ.ಕೃಷ್ಣಪ್ಪ ಅವರು ಎಲ್ಲ ತಳಸಮುದಾಯದ ಪರವಾಗಿ ಹೋರಾಟ ಮಾಡಲಿಲ್ಲವೆ? ಬದುಕನ್ನೇ ಸಮರ್ಪಣೆ ಮಾಡಿ, ಈಗಲೂ ರಾಜ್ಯದಲ್ಲಿರುವ ಕೃಷ್ಣಪ್ಪರ ಅನೇಕ ಹಿರಿಯ ಅನುಯಾಯಿಗಳು ಇವರಿಗೆ ಯಾರೂ ಕಾಣಲಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
- - - -10 ಎಚ್‍ಆರ್‍ಆರ್03: ಪಿ.ಜೆ.ಮಹಾಂತೇಶ್