ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಾಲ್ಕು ಮನೆಗಳ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದು, ಅವರ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ. ಅವರ ಗೆಲುವು ಖಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಪರಿಷತ್ ಚುನಾವಣೆ ದಿನಾಂಕ ಘೋಷಿಸುವ ಮೊದಲೇ ಕಾಂಗ್ರೆಸ್ ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟಿಸಿದೆ. ಆಯನೂರು ಮಂಜುನಾಥ್ ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇದು ಅವರಿಗೆ ವರದಾನವಾಗಲಿದೆ ಎಂದರು.
ಅಭ್ಯರ್ಥಿ ಆಕಾಂಕ್ಷಿಯಾಗಿ ಎಸ್.ಪಿ.ದಿನೇಶ್ ಕೂಡ ಇದ್ದರು. ಈಗ ಪಕ್ಷ ಆಯನೂರು ಮಂಜುನಾಥ್‍ರಿಗೆ ಟಿಕೆಟ್ ನೀಡಿದೆ. ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸುತ್ತೇವೆ. ಆಯನೂರು ಮಂಜುನಾಥ್ ಶಿಕ್ಷಕರ, ಪದವೀಧರರ ಪರವಾಗಿ, ಕಾರ್ಮಿಕರ ಪರವಾಗಿ ಯಾವ ಪಕ್ಷದಲ್ಲಿದ್ದರು ಧ್ವನಿ ಎತ್ತಿದ್ದಾರೆ. ಹಾಗಾಗಿ ಅವರ ಗೆಲುವು ಖಚಿತ ಎಂದರು.ಪದವೀಧರ ಕ್ಷೇತ್ರ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಸೇರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, 6 ಜಿಲ್ಲೆಗಳ ಶಾಸಕರು, ಮುಖಂಡರು, ಉಸ್ತುವಾರಿ ಸಚಿವರ ಸಹಕಾರದಿಂದ ನನಗೆ ಟಿಕೆಟ್ ಸಿಕ್ಕಿದೆ. ಅವರ ಭರವಸೆ ಉಳಿಸಿಕೊಳ್ಳುವೆ. ನನ್ನ ಗೆಳೆಯ ಎಸ್.ಪಿ.ದಿನೇಶ್ ಕೂಡ ಸ್ಪರ್ಧೆಯ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ಸಿಕ್ಕರೆ ನಾನು ಅವರ ಪರ ನಿಂತು ಗೆಲ್ಲಿಸುತ್ತೇನೆ ಎಂದು ಹೇಳಿದ್ದೆ, ಈಗ ನನಗೆ ಟಿಕೆಟ್ ಸಿಕ್ಕಿದೆ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ಪರವಾಗಿ ಅವರು ಕೆಲಸ ಮಾಡುತ್ತಾರೆ. ಎಲ್ಲಾರು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾನು ಈ ಬಾರಿ ಗೆಲ್ಲುತ್ತೇನೆ. ಎದುರಾಳಿ ಯಾರು ಎಂಬುದು ಮುಖ್ಯವಲ್ಲ. ನನ್ನ ಗೆಲ್ಲುವಷ್ಟೇ ಮುಖ್ಯ ಅಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ರಮೇಶ್, ಚಂದ್ರಭೂಪಾಲ್, ಎಸ್.ಟಿ.ಚಂದ್ರಶೇಖರ್, ಎಸ್.ಕೆ.ಮರಿಯಪ್ಪ, ವೈ.ಎಚ್.ನಾಗರಾಜ್, ಎಸ್.ಪಿ.ಶೇಷಾದ್ರಿ, ಧೀರರಾಜ್ ಹೊನ್ನಾವಿಲೆ, ಜಿ.ಪದ್ಮನಾಭ್, ಶಿ.ಜು.ಪಾಶ, ಶಿವಾನಂದ್, ಎನ್.ಡಿ.ಪ್ರವೀಣ್‍ಕುಮಾರ್, ಟಿ.ನೇತ್ರಾವತಿ ಸೇರಿದಂತೆ ಹಲವರಿದ್ದರು.-----------------
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಭರ್ಜರಿ ಪ್ರಚಾರ ಆರಂಭಿಸಿದೆ. ಗೀತಾ ಅತ್ಯಂತ ಉತ್ಸಾಹದಲ್ಲಿದ್ದಾರೆ. ಎಲ್ಲ ಕಡೆ ಭವ್ಯ ಸ್ವಾಗತ ದೊರೆತು ಪ್ರಚಾರ ತೀವ್ರತೆ ಕಂಡು ಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಮಿಂಚಿನ ವಾತಾವರಣವಿದೆ. ಗೀತಾ ಅವರನ್ನು ಖಂಡಿತಾ ಗೆಲ್ಲಿಸುತ್ತೇವೆ.ಆಯನೂರು ಮಂಜುನಾಥ್, ನೈಋತ್ಯ ಪದವೀಧರ ಕ್ಷೇತ್ರ ಘೋಷಿತ ಅಭ್ಯರ್ಥಿ
ಈಶ್ವರಪ್ಪ ಸ್ಪರ್ಧಿಸುವ ವಿಶ್ವಾಸ ಇಲ್ಲ: ಆಯನೂರುನನಗೆ ಈಗಲೂ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಶ್ವಾಸವಿಲ್ಲ. ಈಶ್ವರಪ್ಪ ಯಾವಾಗಲೂ ಕೊನೆವರೆಗೆ ಹೋರಾಟ ಮಾಡಲ್ಲ. ಈಶ್ವರಪ್ಪ ಒಂದು ವೇಳೆ ಸ್ಪರ್ಧಿಸಿದ್ದೆ ಆದರೆ ನನ್ನ ಮತ ಅವರಿಗೆ ಹಾಕ್ತೇನೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಈಶ್ವರಪ್ಪ ಹಾಗೂ ರಾಘವೇಂದ್ರ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಅದು ಸಾಧ್ಯವಿಲ್ಲ. ಇಬ್ಬರ ನಡುವೆ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುವ ಈಶ್ವರಪ್ಪ ಅವರೇ ಮಗನಿಗೆ ಟಿಕೆಟ್ ಸಿಗಲಿಲ್ಲ ಅಂತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಕುಟುಂಬ ರಾಜಕಾರಣ ವಿರೋಧಿಸುವವರು ಮಗನಿಗೆ ಟಿಕೆಟ್ ಸಿಗಲಿಲ್ಲ ಅಂತಾ ಸ್ಪರ್ಧೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಕುಟುಂಬದ ವಿಚಾರ ಬಿಟ್ಟು ಧ್ವನಿ ಎತ್ತಿದ್ದರೆ ಅವರಿಗೆ ಗೌರವ ಇರುತಿತ್ತು. ಬಿಜೆಪಿ ಒಡೆದ ಮನೆಯಲ್ಲ, ಚೂರು ಚೂರಾದ ಮನೆಯಾಗಿದೆ. ಪಕ್ಷದ ಶುದ್ಧೀಕರಣ ಮಾಡಬೇಕು ಅಂತಿದ್ದಾರೆ. ನನಗೂ ಕೂಡ ಸಾಕಷ್ಟು ನೋವಿತ್ತು. ನಾನು ನೋವಿನಿಂದಲೇ ಬಿಜೆಪಿಯಿಂದ ಹೊರ ಬಂದಿದ್ದೆ. ನಾನು ಪಕ್ಷ ಬಿಟ್ಟಾಗ ಯಾರು ಮಾತನಾಡಲಿಲ್ಲ. ಈಗ ಅವರ ಬುಡಕ್ಕೆ ಬಂದಾಗ ಎಲ್ಲಾ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದರು.