ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಸಾಣೇಹಳ್ಳಿಯ ಶ್ರೀಮಠದಲ್ಲಿ ನಡೆದ ಅಲ್ಲಮಪ್ರಭು ಜಯಂತಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ ಅಪ್ಪಟ ಅಧ್ಯಾತ್ಮಿಕ ತೇಜಸ್ಸನ್ನು ಹೊಂದಿದ್ದ ಅಲ್ಲಮಪ್ರಭುಗಳು ವಯೋವೃದ್ಧರು ಮಾತ್ರವಲ್ಲದೆ ಅನುಭವವೃದ್ಧರೂ ಆಗಿದ್ದರು. ಅಲ್ಲಮ ಪ್ರಭುಗಳು ನಟುವರ ಜಾತಿಯಲ್ಲಿ ಜನಿಸಿದವರಾದರೂ ಬಸವಣ್ಣನವರು ಎಂದೂ ಜಾತಿಯನ್ನು ನೋಡಲಿಲ್ಲ. ಬದಲಾಗಿ ಅವರಲ್ಲಿದ್ದ ವಿದ್ವತ್ತು ಮತ್ತು ಅನುಭವಕ್ಕೆ ಮನ್ನಣೆ ನೀಡಿದರು. ಇದು ಅಂದಿನ ಕಾಲದ ಸಾಮಾಜಿಕ ಕ್ರಾಂತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಅಲ್ಲಮ ಪ್ರಭುಗಳು ದೊಡ್ಡ ಸ್ಥಾನದಲ್ಲಿದ್ದರೂ ಎಂದಿಗೂ ಅಹಂಕಾರ ಪಟ್ಟವರಲ್ಲ. ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಅಕ್ಕಮಹಾದೇವಿಯವರನ್ನು ಶರಣಾರ್ಥಿ ತಾಯಿ ಎಂದು ಸಂಬೋಧಿಸುವ ಮೂಲಕ ಸ್ತ್ರೀ ಕುಲಕ್ಕೆ ಗೌರವ ನೀಡಿದ್ದರು. ಅಲ್ಲದೆ ಚನ್ನಬಸವಣ್ಣನವರನ್ನು ಮಹಾಜ್ಞಾನಿಗಳು ಎಂದು ಕರೆಯುವ ಮೂಲಕ ಕಿರಿಯರ ಜ್ಞಾನವನ್ನೂ ಗೌರವಿಸುತ್ತಿದ್ದರು.ಅವರ ಈ ತತ್ತ್ವಗಳು ಮತ್ತು ಜೀವನ ಶೈಲಿ ಇಂದಿನ ಜನಪ್ರತಿನಿಧಿಗಳಿಗೆ, ಮಠಾಧೀಶರಿಗೆ ಹಾಗೂ ಸಾರ್ವಜನಿಕರಿಗೆ ಅತ್ಯಂತ ಅವಶ್ಯಕವಾಗಿದೆ ಅವರ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.