- ಕೇಂದ್ರ ಉಕ್ಕು ಸಚಿವ ಎಚ್‌ಡಿಕೆ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಡಿ.ಬಸವರಾಜ ಹೇಳಿಕೆ
- 2021ರಲ್ಲಿ ಬಿಜೆಪಿ ಸರ್ಕಾರದಿಂದಲೇ ಶೇ.50-50 ನಿಯಮ ಮಾಡಿ, ಬದಲಿ ನಿವೇಶನ ವಿತರಣೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಡಾ ಹಗರಣ ಹೊರಬರುವಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೈವಾಡ ಇದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ ಕೇವಲ ಹಿಟ್ ಅಂಡ್ ರನ್ ಆರೋಪದಂತಿದೆ. ಇಂತಹ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೀಡಿ ಫ್ಯಾಕ್ಟರಿ ನಂತರ ಈಗ ಮುಡಾ ಫ್ಯಾಕ್ಟರಿ ಹೊರಬರುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ. ಹಿಟ್ ಅಂಡ್ ರನ್ ಆರೋಪ ಮಾಡುವುದರಲ್ಲೂ ಎಚ್‌ಡಿಕೆ ಸಿದ್ಧಹಸ್ತರಿದ್ದಾರೆ. ಈ ವಿಚಾರದಲ್ಲಿ ಅವರು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ ಎಂದರು.
ಕುಮಾರಸ್ವಾಮಿ ಇಲ್ಲಿಯವರೆಗೆ ಮಾಡಿದ ಆರೋಪಗಳಲ್ಲಿ ಯಾವುದಾದರೂ ಒಂದೇ ಒಂದು ಆರೋಪ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರಾ? ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ತವರು ಮನೆಯಿಂದ ಉಡುಗೊರೆಯಾಗಿ ಬಂದ 3.16 ಎಕರೆ ಜಮೀನನ್ನು ಅಕ್ರಮ ಒತ್ತುವರಿ ಮಾಡಿಕೊಂಡಿದ್ದು, ಅದಕ್ಕೆ ಬದಲಾಗಿ ನಿವೇಶನ ನೀಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ. 2021ರಲ್ಲಿ ಬಿಜೆಪಿ ಸರ್ಕಾರವೇ ಶೇ.50-50 ನಿಯಮ ಮಾಡಿ, ಬದಲಿ ನಿವೇಶನ ಕೊಟ್ಟಿತ್ತು. ಈಗ ಅದೇ ಬಿಜೆಪಿ ಅಕ್ರಮ ಎಂದು ಬೊಬ್ಬೆ ಹೊಡೆಯುತ್ತಿದೆ ಎಂದು ಟೀಕಿಸಿದರು.ಬಿಜೆಪಿ ಸರ್ಕಾರದಲ್ಲೇ ನಿವೇಶನ ಹಂಚಿಕೆ:
ಮುಡಾ ನಿವೇಶನ ಹಂಚಿಕೆ ಬಗ್ಗೆ ಬಿಜೆಪಿ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತವಾಗಿವೆ. ಇವೆಲ್ಲವೂ ಅಂಕಿ ಅಂಶಗಳ ಮೇಲೆ ಮಾಡಿದ ಆರೋಪಗಳಲ್ಲ. ಬಿಜೆಪಿಗೆ ಆಡಳಿತಾತ್ಮಕವಾಗಿ ವಿರೋಧಿಸಲು ಬೇರೇನೂ ವಿಷಯಗಳೇ ಇಲ್ಲ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಹೈಕಮಾಂಡನ್ನು ತೃಪ್ತಿಪಡಿಸಲು ಇಂತಹ ನಾಟಕ ಮಾಡತ್ತಿದ್ದಾರಷ್ಟೇ. ನಿವೇಶನ ಹಂಚಿಕೆಯಾಗಿದ್ದು ಬಿಜೆಪಿ ಅವಧಿಯಲ್ಲಿ ಎಂಬುದನ್ನೂ ವಿಪಕ್ಷದವರು ಮರೆಯಬಾರದು ಎಂದು ತಿಳಿಸಿದರು.ಜಮೀನು ಒತ್ತುವರಿ ಮಾಡಿಕೊಂಡಿದ್ದನ್ನು ಸ್ವತಃ ಮುಡಾದವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಪರ್ಯಾಯವಾಗಿ ಶೇ.50-50 ಅನುಪಾತದಲ್ಲಿ ನಿವೇಶನ ಕೊಡಲು ಬಿಜೆಪಿಯವರೇ ನಿಯಮವನ್ನೂ ಮಾಡಿದ್ದರು. ಯಾರು ಯಾರ ಜಮೀನು ವಶಪಡಿಸಿಕೊಂಡಿದ್ದರೋ ಅಂಥವರಿಗೆಲ್ಲಾ ಇದೇ ಅನುಪಾತದಲ್ಲಿ ನಿವೇಶನ ನೀಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಸಹ ಒಪ್ಪಿದೆ. ಹಾಗೆಯೇ, ಇಂತಹ ಕಡೆಯೇ ಬದಲಿ ನಿವೇಶನ ನೀಡುವಂತೆಯೂ ಕೇಳಿರಲಿಲ್ಲ ಎಂದು ಹೇಳಿದರು.
- - - ಬಾಕ್ಸ್-1 * ಮೊಸರಲ್ಲಿ ಕಲ್ಲು ಹುಡುಕುವ ಯತ್ನ ಸಿದ್ದರಾಮಯ್ಯನವರ ಪತ್ನಿ ಕಳೆದುಕೊಂಡಿದ್ದ ಜಮೀನಿಗೆ ಕಾನೂನುಬದ್ಧವಾಗಿ ಮುಡಾ ಬೇರೆ ಕಡೆ ಭೂಮಿ ನೀಡಿದೆ. ಆದರೆ, ಬಿಜೆಪಿಯವರು ಪ್ರಚಾರದ ಆಸೆಗಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿದ್ದ ಎಲ್ಲ ನಿವೇಶನಗಳನ್ನೂ ಅಮಾನತಿನಲ್ಲಿಟ್ಟು, ಹಿಂದಿನ ಬಿಜೆಪಿ ಅಧಿಕಾರ ಅವಧಿಯಲ್ಲಿ ಆಗ ನಿವೇಶನ ಹಂಚಿಕೆ ಮಾಡಿದ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆ ನಡೆಸಲಾಗುತ್ತಿದೆ. ತನಿಖೆ ವರದಿ ಬಂದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಬಸವರಾಜ ವಿವರಿಸಿದರು.- - - ಬಾಕ್ಸ್-2 * ಸಿಎಂ ವಿರುದ್ಧ ಸುಳ್ಳು ಆರೋಪ ಈ ಹಿಂದೆ ನಿವೇಶನ ಹಂಚಿದವರು ಬಿಜೆಪಿಯವರೇ ಆಗಿದ್ದು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವುದರಲ್ಲಿ ಯಾವ ಅರ್ಥವೂ ಇಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರೂ ಸಂತೃಷ್ಟರಾಗಿ, ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿಯೇ, ಇಷ್ಟು ವರ್ಷ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆಯೂ ಬಾರದಂತೆ ಆಡಳಿತ ನೀಡಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಬಿ.ಎಚ್. ಉದಯಕುಮಾರ, ಲಿಯಾಖತ್ ಅಲಿ, ಡಿ.ಶಿವಕುಮಾರ, ಕೆ.ಎಂ. ಮಂಜುನಾಥ, ಬಿ.ಎಸ್. ಸುರೇಶ, ವಿನಾಯಕ, ಮುಬಾರಕ್ ಇತರರು ಇದ್ದರು.- - -
ಟಾಪ್ ಕೋಟ್ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷವಿರೋಧಿ ಚಟುವಟಿಕೆ ಮಾಡಿದ್ದೇವೆಂದು ನಮ್ಮ ಬಗ್ಗೆ ಹೇಳುವವರು ಹರಿಹರ ಮತ್ತು ಜಗಳೂರು ಕ್ಷೇತ್ರದಲ್ಲಿ ಬಿಜೆಪಿಗೆ ಯಾಕೆ ಕಡಿಮೆ ಮತ ಬಂದವು ಎಂಬುದನ್ನೂ ಮೊದಲು ಹೇಳಬೇಕು. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರೋದು ಮೊದಲು ನೋಡಿಕೊಳ್ಳಲಿ. ಆನಂತರ ಮತ್ತೊಬ್ಬರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಮಾತನಾಡಲಿ- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ
- - - -7ಕೆಡಿವಿಜಿ2:ದಾವಣಗೆರೆಯಲ್ಲಿ ಭಾನುವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.