ಆರೋಪ- ಪ್ರತ್ಯಾರೋಪ ಬಿಡಿ; ತಪ್ಪು ಸರಿಪಡಿಸಿ

KannadaprabhaNewsNetwork | Updated : Nov 05 2024, 12:33 AM IST

ಸಾರಾಂಶ

ಇವರು (ಬಿಜೆಪಿ) ಅವರ (ಕಾಂಗ್ರೆಸ್‌) ಮೇಲೆ, ಅವರು, ಇವರ ಮೇಲೆ ಹೀಗೆ ಬರೀ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆಯೇ ಹೊರತು, ನಮ್ಮ ಕಷ್ಟ ಯಾರೂ ಕೇಳುತ್ತಿಲ್ಲ. ಕಳೆದ ನಾಲ್ಕು ವರ್ಷದಿಂದಲೇ ನಾವು ಕಚೇರಿ ಕಚೇರಿ ಅಲೆಯುತ್ತಿದ್ದೇವೆ. ನಮಗೆ ಸಾಲನೂ ಸಿಗ್ತಾ ಇಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಇವರ ಕಾಲದಲ್ಲಿ ಆಗಿದೆಯೋ? ಅವರ ಕಾಲದಲ್ಲಿ ಆಗಿದೆಯೋ? ಯಾರಿಗೆ ಗೊತ್ತು, ನಮ್‌ ಹೊಲದ ಉತಾರದೊಳಗಿದ್ದ "ವಕ್ಫ್‌ ಆಸ್ತಿ " ಎಂಬ ಪದ ತೆಗೆದು ಹಾಕಿ ಪುಣ್ಯ ಕಟ್ಕೊಳ್ಳಿ..

ವಕ್ಫ್‌ ಆಸ್ತಿ ವಿವಾದಕ್ಕೆ ಕುರಿತಂತೆ ಬಿಜೆಪಿ-ಕಾಂಗ್ರೆಸ್‌ ನಡುವೆ ನಡೆಯುತ್ತಿರುವ ಹಗ್ಗ-ಜಗ್ಗಾಟಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬಗೆಯಿದು.

ಇವರು (ಬಿಜೆಪಿ) ಅವರ (ಕಾಂಗ್ರೆಸ್‌) ಮೇಲೆ, ಅವರು, ಇವರ ಮೇಲೆ ಹೀಗೆ ಬರೀ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆಯೇ ಹೊರತು, ನಮ್ಮ ಕಷ್ಟ ಯಾರೂ ಕೇಳುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದಲೇ ನಾವು ಕಚೇರಿ ಕಚೇರಿ ಅಲೆಯುತ್ತಿದ್ದೇವೆ. ನಮಗೆ ಸಾಲನೂ ಸಿಗ್ತಾ ಇಲ್ಲ. ಮಾರಾಟ ಮಾಡಾಕೂ ಆಗ್ತಾ ಇಲ್ಲ. ನಾಲ್ಕು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರೂ ಈಗ ಇವರಿಗೆ ಎಚ್ಚರ ಆಗಿದೆ ಎಂದು ನವಲಗುಂದದ ರೈತ ಮಂಜುನಾಥ ಎಂಬಾತ ಕಿಡಿಕಾರುತ್ತಾರೆ.

ರಾಜ್ಯದಲ್ಲಿ ಬಹುತೇಕ ಗ್ರಾಮಗಳಲ್ಲಿನ ರೈತರ ಹೊಲಗಳ ಉತಾರಗಳಲ್ಲಿ 11ನೆಯ ಕಾಲಂನಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಕೆಲವೊಂದಿಷ್ಟು ರೈತರಿಗೆ ನೋಟಿಸ್‌ ಕೂಡ ಹೋಗಿದೆ. ಅಳ್ನಾವರದಲ್ಲಿ ಪೊಲೀಸ್‌ ಠಾಣೆಯ ಆಸ್ತಿಯೂ ವಕ್ಫ್‌ ಆಸ್ತಿ ಎಂದಾಗಿದೆ. ಹಿಂದೂ, ಮುಸ್ಲಿಂ ರೈತರ ಹೊಲಗಳಲ್ಲಿ ವಕ್ಫ್‌ ಆಸ್ತಿ ಹೆಸರು ನಮೂದಾಗಿದೆ.

ಕೆಲ ವಿದ್ಯಾವಂತ ರೈತರು ಕೋರ್ಟ್‌ ಮೊರೆ ಹೋಗಿರುವುದುಂಟು. ಆದರೆ ಇದೀಗ ಎದ್ದಿರುವ ಪ್ರಶ್ನೆ. ಅದ್ಹೇಗೆ ಇಷ್ಟೊಂದು ರೈತರ ಹೊಲಗಳ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂಬುದು ನಮೂದಾಯ್ತು? ಇದಕ್ಕೆ ಕಾರಣವೇನು? ಎಲ್ಲಿ ತಪ್ಪಾಗಿದೆ? ಎಂಬುದನ್ನು ತಿಳಿಸಬೇಕಿದೆ. ಆಗಿರುವ ತಪ್ಪನ್ನು ಸರಿಪಡಿಸುವ ಕೆಲಸ ಈಗ ಇರುವ ಸರ್ಕಾರ ಮಾಡಬೇಕು. ವಕ್ಫ್‌ ಮಂಡಳಿ ಹೊರಡಿಸಿರುವ ನೋಟಿಫಿಕೇಶನ್‌ ಎಲ್ಲ ರದ್ದುಪಡಿಸುವ ಕೆಲಸವನ್ನು ಸರ್ಕಾರ ಮಾಡಲಿ ಎಂಬುದು ರೈತರ ಆಗ್ರಹ.

ಆರೋಪ- ಪ್ರತ್ಯಾರೋಪ:

ಅದು ಬಿಟ್ಟು ಬಿಜೆಪಿ ಸರ್ಕಾರವಿದ್ದಾಗ ನೋಟಿಫಿಕೇಶನ್‌ ಮಾಡಿದ್ದಾರೆ. ನೋಟಿಸ್‌ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದರೆ, ಕಾಂಗ್ರೆಸ್‌ ಮಾಡುವುದೇ ಹೀಗೆ, ಹಿಂದೂ ರೈತರ ಜಮೀನು ಕಬಳಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್‌ನ ಹಲವು ಪ್ರಬಲರೇ ವಕ್ಫ್‌ ಆಸ್ತಿ ಕಬಳಿಸಿದ್ದಾರೆ. ಮತ್ತೊಂದು ನರಗುಂದ ಬಂಡಾಯದಂಥ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಬಿಜೆಪಿ ನೀಡುತ್ತಿದೆ. "ಹೀಗೆ ಆರೋಪ ಪ್ರತ್ಯಾರೋಪ ಬಿಡಿ. ಆಗಿರುವ ತಪ್ಪನ್ನು ಸರಿಪಡಿಸಿ. ಮೊದಲೇ ಬರ, ಅತಿವೃಷ್ಟಿ ಎಂದು ಜಮೀನುಗಳಲ್ಲಿನ ಬೆಳೆ ಸರಿಯಾಗಿ ಬರುತ್ತಿಲ್ಲ ಎಂದು ಕಂಗಾಲಾಗಿದ್ದೇವೆ. ಹೇಗಪ್ಪ ಜೀವನ ಕಳೆಯೋದು ಎಂಬ ಚಿಂತೆಯಲ್ಲಿ ನಾವಿದ್ದರೆ, ನೀವು ನಮ್ಮ ಬದುಕಿನೊಂದಿಗೆ ಆಟ ಆಡುತ್ತಿದ್ದೀರಿ. ಮೊದಲ ನಮ್‌ ಹೊಲದ ಪಹಣಿಯಲ್ಲಿನ ವಕ್ಫ್‌ ಆಸ್ತಿ ಎಂಬುದನ್ನು ಅಳಿಸಿ ಹಾಕಿ. ಸಾಲಕ್ಕೆ ಪರದಾಡುತ್ತಿರುವುದನ್ನು ತಪ್ಪಿಸಿ ಪುಣ್ಯಕಟ್ಕೊಳ್ಳಿ " ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೋಟಿಸ್‌ ಕೊಡಬೇಡಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೆ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದನ್ನು ತೆಗೆದುಹಾಕುತ್ತೇವೆ. ನೋಟಿಫಿಕೇಶನ್‌ ರದ್ದುಪಡಿಸುತ್ತೇವೆ ಎಂದು ಹೇಳಲಿ ಎಂದು ಅನ್ನದಾತ ಆಗ್ರಹಿಸುತ್ತಾರೆ.

ಒಟ್ಟಿನಲ್ಲಿ ವಕ್ಫ್‌ ವಿವಾದ, ಆ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಎರಡು ಪಕ್ಷಗಳ ಹಗ್ಗ ಜಗ್ಗಾಟಕ್ಕೆ ರೈತರು ಬೇಸತ್ತಿರುವುದಂತೂ ಸತ್ಯ. ಅವರಿಗೀಗ ಆಗಿರುವ ತಪ್ಪನ್ನು ತಿದ್ದುವಂತಹ ಕೆಲಸ ಮಾತ್ರ. ಆ ಕೆಲಸ ಸರ್ಕಾರ ಮಾಡಿ ತೋರಿಸಲಿ ಎಂದಷ್ಟೇ ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಷ್ಟೇ.

ವಕ್ಪ್‌ ಆಸ್ತಿ ಸಂಬಂಧಪಟ್ಟಂತೆ ಬಿಜೆಪಿ- ಕಾಂಗ್ರೆಸ್‌ ಜನಪ್ರತಿನಿಧಿಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅದನ್ನು ಬಿಟ್ಟು ಪಹಣಿಯಲ್ಲಿ ನಮೂದಾಗಿರುವ ವಕ್ಫ್‌ ಆಸ್ತಿ ಎಂಬುದನ್ನು ತೆಗೆದುಹಾಕಲು ಏನು ಮಾಡಬೇಕು ಆ ಕೆಲಸ ಮಾಡಲಿ. ಇನ್ಮುಂದೆ ಈ ರೀತಿ ರೈತರಿಗೆ ತೊಂದರೆ ಕೊಡದಂತೆ ಕ್ರಮ ಕೈಗೊಳ್ಳಲಿ ಎಂದು ರೈತ ರಮೇಶ ಚಾಕಲಬ್ಬಿ ಹೇಳಿದರು.

Share this article