ಚೌಳೂರು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಅಕ್ರಮ ಆರೋಪ

KannadaprabhaNewsNetwork |  
Published : May 27, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ಚೌಳೂರು ಬಳಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ಚೌಳೂರು ಸಮೀಪದ ಬಸವೇಶ್ವರ ಕಾಲೋನಿಯ ಹಳ್ಳದಲ್ಲಿದ್ದ ಹಳೆಯ ಚೆಕ್ ಡ್ಯಾಂ ತೆರವುಗೊಳಿಸಿ ಹೊಸ ಚೆಕ್ ಡ್ಯಾಂ ನಿರ್ಮಿಸಲು ಹೊರಟಿರುವವರು ಅಕ್ರಮ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರೋಪದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ.

ಈಗ ಚೆಕ್ ಡ್ಯಾಂ ನಿರ್ಮಿಸಲು ಹೊರಟಿರುವ ಸರ್ಕಾರಿ ಜಮೀನಿನಲ್ಲಿ 15 ವರ್ಷಗಳ ಹಿಂದೆ ಕಟ್ಟಿದ ಚೆಕ್ ಡ್ಯಾಂ ಶಿಥಿಲಗೊಂಡು ನೀರು ನಿಲ್ಲದೇ ಇರುವುದರಿಂದ ಹೊಸದಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಆನ್‌ಲೈನ್ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯಡಿ ಟೆಂಡರ್ ಪಡೆದು 50 ಲಕ್ಷದ ಚೆಕ್ ಡ್ಯಾಂ ನಿರ್ಮಿಸುವ ಯೋಜನೆ ಇದಾಗಿದೆ.

ಡ್ಯಾಂ ನಿರ್ಮಾಣ ಮಾಡುವ ಜಾಗದ ಪಕ್ಕದ ಜಮೀನಿನ ರೈತ ರೇಣುಕಾಪ್ರಸಾದ್ ಇದೀಗ ತಕರಾರು ತೆಗೆದಿದ್ದಾರೆ. ಇಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವವರು ನೂರಾರು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಬೃಹತ್ ಗಾತ್ರದ ಗುಂಡಿ ಅಗೆಯಲಾಗಿದೆ. ಮಳೆ ಬಂದಂತಹ ಸಂದರ್ಭದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ನಮ್ಮ ಜಮೀನಿಗೆ ಸಮಸ್ಯೆ ಆಗಲಿದೆ ಎಂದು ಆರೋಪಿಸುತ್ತಾರೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಸ್ಥಳಕ್ಕೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೇಲಾಧಿಕಾರಿಗಳ ಹತ್ತಿರ ಮಾತನಾಡಲಾಗುವುದು ಎಂದು ಹೇಳುತ್ತಾರೆ.

ಸರ್ಕಾರದ ವ್ಯಾಪ್ತಿಯಲ್ಲಿ ಇರುವ ಜಮೀನುಗಳಲ್ಲಿ, ಅರಣ್ಯ ಪ್ರದೇಶಗಳ ಮಧ್ಯ ಭಾಗಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವವರ ಸಂಖ್ಯೆ ತಾಲೂಕಿನಲ್ಲಿ ಹೆಚ್ಚುತ್ತಿದೆ. ಸರ್ಕಾರದ ಮಟ್ಟದಲ್ಲಿ ಇಂತಿಷ್ಟು ಕೋಟಿಗಳ ವೆಚ್ಚದಲ್ಲಿ ಚೆಕ್ ಡ್ಯಾಂ ಹಾಕಿಸಿಕೊಂಡು ಬಂದು ಆನ್ ಲೈನ್ ಟೆಂಡರ್ ಗಳಲ್ಲಿ ಯಾರಿಗೇ ಆದರೂ ಮಾಡುವವರು ಬೇರೆ ಇರುತ್ತಾರೆ. ಕಮೀಷನ್ ಕೊಟ್ಟು ಗುತ್ತಿಗೆದಾರರು ಇಂತಹ ಸರ್ಕಾರಿ ಜಮೀನುಗಳಿಗೆ ಲಗ್ಗೆ ಹಾಕುತ್ತಾರೆ. ಇಲ್ಲಿ ಗುಣಮಟ್ಟ ಎಂಬುದು ದೂರದ ಮಾತು ಎನ್ನುತ್ತಾರೆ ಸ್ಥಳೀಯರು.

ಚಳ್ಳಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಮೀಸಲಾಗಿರುವ ಭದ್ರ ಮೇಲ್ದಂಡೆ ಯೋಜನೆಯ ಅನುದಾನದಲ್ಲಿ ಈ ಚೆಕ್ ಡ್ಯಾಂ ಕಾಮಗಾರಿಯನ್ನು ಆನ್ ಲೈನ್ ಮೂಲಕ ಪಡೆಯಲಾಗಿದೆ. ಇದು ಜಿಎಸ್ಟಿ ಸೇರಿ 50ಲಕ್ಷದ ಕಾಮಗಾರಿ. ಹಳೆಯ ಚೆಕ್ ಡ್ಯಾಂ ಶಿಥಿಲಗೊಂಡಿರುವ ಕುರಿತು ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಪ್ಲಾನಿಂಗ್ ಮಾಡುವಾಗ ಸರ್ಟಿಫೈಡ್ ಮಾಡಿದ್ದಾರೆ. ಆದ್ದರಿಂದ ಈ ಸರ್ಕಾರಿ ಜಮೀನನಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭಿಸಿದ್ದೇವೆ. ಆರೋಪ ಮಾಡುತ್ತಿರುವ ರೈತನಿಗೆ ನಮ್ಮಿಂದ ಯಾವುದೇ ತೊಂದರೆ ಆಗಿಲ್ಲ. ಅಕ್ರಮವಾಗಿ ಮಣ್ಣನ್ನು ನಾವು ಶೇಖರಿಸಿಲ್ಲ. ಅದು ನಮಗೆ ತಿಳಿಯದ ಹಾಗೆ ರೈತರು ಮಾಡಿದ್ದಾರೆ ಎನ್ನುತ್ತಾರೆ ಈ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ರವಿಕುಮಾರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಗಾರು ಕೃಷಿ ಚಟುವಟಿಕೆಸಿದ್ಧತೆಗೆ ರೈತರಿಗೆ ಸಲಹೆಗಳು
ಭೂ ದಾಖಲೆಗಳ ಡಿಜಿಟಲೀಕರಣದಲ್ಲಿ ಕ್ರಾಂತಿ ಬೆಳವಣಿಗೆ