ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಸಾವಿರಾರು ಎಕರೆ ಜಮೀನನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಗೆ ನಕಲಿ ದಾಖಲೆ ಸೃಷ್ಟಿಸಿ ಹಸ್ತಾಂತರ ಮಾಡಿರುವ ಭೂ ಹಗರಣವನ್ನು ಶಾಸಕ ಎಂ.ಟಿ.ಕೃಷ್ಣಪ್ಪನವರು ಪತ್ತೆ ಹಚ್ಚಿ ದಾಖಲೆಗಳ ಸಹಿತ ಪತ್ರಕರ್ತರ ಎದುರು ಬಹಿರಂಗಗೊಳಿಸಿದರು.ಈ ಅಕ್ರಮದಲ್ಲಿ ತೊಡಗಿರುವ ಕಂದಾಯ ಇಲಾಖಾ ಅಧಿಕಾರಿಗಳು ಮತ್ತು ಮಧ್ಯವರ್ತಿಗಳನ್ನು ಕೂಡಲೇ ಬಂಧಿಸಿ, ಆ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಅವರು ಆಗ್ರಹಿಸಿದರು.
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ನೂರಾರು ಎಕರೆ ಗೋಮಾಳ, ಅರಣ್ಯ ಭೂಮಿಯನ್ನು ಬಗರ್ ಹುಕುಂ ಕಮಿಟಿ ಮುಂದೆ ಅರ್ಜಿಗಳನ್ನು ತರದೇ ಕಂದಾಯ ಅಧಿಕಾರಿಗಳು ಅಕ್ರಮವಾಗಿ ಜಮೀನುಗಳನ್ನು ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.ಈ ಹಿಂದಿನ ತಹಸೀಲ್ದಾರ್ ರೇಣುಕುಮಾರ್ ಅವಧಿಯಲ್ಲಿ ಸಾವಿರಾರು ಎಕರೆ ಗೋಮಾಳ ಹಾಗೂ ಅರಣ್ಯ ಭೂಮಿಯನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಪರಭಾರೆ ಮಾಡಲಾಗಿದೆ. ಪ್ರತಿ ಎಕರೆ ಜಮೀನಿಗೆ ಲಕ್ಷಾಂತರ ರು. ಹಣ ಪಡೆದು ಅಧಿಕಾರಿಗಳು ಮಂಜೂರು ಮಾಡಿಕೊಟ್ಟಿದ್ದಾರೆ, ಈ ಜಮೀನುಗಳ ಮೌಲ್ಯ ಐನೂರು ಕೋಟಿಗೂ ಅಧಿಕವಾಗಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಮಾಯಸಂದ್ರ ಹೋಬಳಿ ನರೀಗೆಹಳ್ಳಿ ಗ್ರಾಮದ ಸರ್ವೇ ನಂ. ೨೨ ರಲ್ಲಿ ಜಯಮ್ಮ ಕೋಂ ನರಸಿಂಹಯ್ಯ ೩ ಎಕರೆ, ಚಿಕ್ಕಮ್ಮ ಕೋಂ ನರಸಿಂಹಯ್ಯ ೨.೩೦ ಎಕರೆ, ರಾಮಣ್ಣ ಬಿನ್ ಮುದ್ದಯ್ಯ ೩ ಎಕರೆ, ಸಣ್ಣ ಹನುಮಯ್ಯ ಬಿನ್ ತಿಮ್ಮಯ್ಯ ೨.೨೨ ಎಕರೆ. ಸರ್ವೇ ನಂ ೨೦ ರಲ್ಲಿ ಆರ್.ರಂಗಸ್ವಾಮಿ ಬಿನ್ ರಂಗಯ್ಯ ೩ ಎಕರೆ, ಹುಚ್ಚಯ್ಯ ಬಿನ್ ನರಸಿಂಹಯ್ಯ ೩.೧೦ ಎಕರೆ, ತಿಮ್ಮಯ್ಯ ಬಿನ್ ಹನುಮಯ್ಯ ೩.೧೦ ಎಕರೆ, ತಿಮ್ಮಯ್ಯ ಬಿನ್ ಹನುಮಯ್ಯ ೩.೩೫ ಎಕರೆ ಜಮೀನನ್ನು ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು ಅಕ್ರಮವಾಗಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದಾರೆ.ತಾಲೂಕಿನಾದ್ಯಂತ ಒಂದು ದೊಡ್ಡ ಜಾಲವೇ ಹರಡಿದೆ. ಸದ್ಯ ತಾನು ಅಕ್ರಮವಾಗಿ ಮುಂಜೂರು ಮಾಡಿಸಿಕೊಂಡಿರುವ ೩೦ಕ್ಕೂ ಹೆಚ್ಚು ಜನರ ಮಾಹಿತಿಯನ್ನು ಕಲೆಹಾಕಿದ್ದೇನೆ. ಸಂಪೂರ್ಣ ತನಿಖೆ ನಡೆದರೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜಮೀನು ಪರಭಾರೆ ಆಗಿರುವುದು ಬೆಳಕಿಗೆ ಬರಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಈ ಜಾಲದಲ್ಲಿ ಹಿಂದಿನ ತಹಸೀಲ್ದಾರ್ ರೇಣುಕುಮಾರ್, ಕಂದಾಯ ಇಲಾಖಾ ಅಧಿಕಾರಿಗಳಾದ ಪರಮೇಶ್, ಅಣ್ಣಪ್ಪ, ಬಸವರಾಜು, ಸುಧಾಕರ್, ರಾಮಣ್ಣ, ರವಿ, ಮಧ್ಯವರ್ತಿಯಾಗಿರುವ ಅಟ್ಟಯ್ಯ ಸೇರಿ ಹಲವರ ಹಸ್ತಕ್ಷೇಪ ಇದೆ. ಕೂಡಲೇ ಅವರೆಲ್ಲರನ್ನೂ ಸರ್ಕಾರಿ ಕೆಲಸದಿಂದ ಅಮಾನತುಗೊಳಿಸಬೇಕು. ಅಲ್ಲದೇ ಅವರನ್ನೆಲ್ಲಾ ಕೂಡಲೇ ಬಂಧಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಶಾಸಕರು ಆಗ್ರಹಿಸಿದರು.ಲೋಕಾಯುಕ್ತಕ್ಕೆ ದೂರು: ಈ ಅಕ್ರಮದ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು. ಅಕ್ರಮ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಇನ್ನು ಹೆಚ್ಚಿನ ಮಾಹಿತಿ ಪಡೆದು ಸಮಗ್ರ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೂ ದೂರು ಸಲ್ಲಿಸುತ್ತಿದ್ದೇನೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ತ್ಯಾಗರಾಜು, ವಿಜಯಕುಮಾರ್, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಮಾದಿಹಳ್ಳಿ ಕಾಂತರಾಜು, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ವಿಜಯೇಂದ್ರ ಕುಮಾರ್, ಬೂವನಹಳ್ಳಿ ಪುನೀತ್, ಮುನಿಯೂರು ರಂಗಸ್ವಾಮಿ, ಕಲ್ಲಬೋರನಹಳ್ಳಿ ಜಯರಾಮಯ್ಯ ಸೇರಿ ಇತರರು ಇದ್ದರು.