ಬಳ್ಳಾರಿ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ 14 ಮತ್ತು 15ನೇ ಹಣಕಾಸು ಯೋಜನೆಯ ಅನುದಾನವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ತಾಲೂಕು ವ್ಯಾಪ್ತಿಯ 14 ಗ್ರಾಪಂಗಳ ಮೇಲೆ ಲೋಕಾಯುಕ್ತರು ಶುಕ್ರವಾರ ದಾಳಿ ನಡೆಸಿ, ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ.ಸಂಜೆ ವರೆಗೆ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿತ್ತು. ಬೆಳಗ್ಗೆಯೇ ಗ್ರಾಪಂಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನ, ಈವರೆಗೆ ಕೈಗೊಂಡಿರುವ ಕಾಮಗಾರಿಗಳು, ಬಳಕೆಯಾದ ಅನುದಾನ ಸಮರ್ಪಕವಾಗಿದೆಯೇ ಇಲ್ಲವೋ? ಎಂಬಿತ್ಯಾದಿ ಮಾಹಿತಿಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಧರಗಡ್ಡೆ, ಸಂಗನಕಲ್ಲು, ಕಪ್ಪಗಲ್ಲು, ಕೊಳಗಲ್ಲು, ಮೋಕಾ, ತೋರಣಗಲ್ಲು, ಪರಮದೇವನಹಳ್ಳಿ, ಚೇಳ್ಳಗುರ್ಕಿ, ರೂಪನಗುಡಿ, ಹಲಕುಂದಿ, ಸಂಜೀವರಾಯನಕೋಟೆ, ಶಂಕರಬಂಡೆ, ಬೆಳಗಲ್ಲು, ಸಿರಿವಾರ ಗ್ರಾಪಂಗಳಿಗೆ ತೆರಳಿದ ಲೋಕಾಯುಕ್ತರು ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಚಿತ್ರದುರ್ಗ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಇಬ್ಬರು ಡಿವೈಎಸ್ಪಿ, 12 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ ದಾಳಿಯಲ್ಲಿದ್ದರು.ಈ ಕುರಿತು ಕನ್ನಡಪ್ರಭ ಜೊತೆ ಮಾತನಾಡಿದ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು, ಗ್ರಾಪಂನ 14 ಮತ್ತು 15ನೇ ಹಣಕಾಸು ಯೋಜನೆಯ ಅನುದಾನ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ದಾಳಿಗೆ ಆದೇಶ ಕೋರಿ ರಾಜ್ಯ ಲೋಕಾಯುಕ್ತರಿಗೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ವಾರೆಂಟ್ ನೀಡಿ ದಾಳಿಗೆ ಸೂಚನೆ ಬಂತು. ಹಾಗಾಗಿ ದಾಳಿ ನಡೆಸಲಾಗಿದೆ ಎಂದರು.ಇಂಥ ದಾಳಿ ರಾಜ್ಯದಲ್ಲಿ ಇದೇ ಮೊದಲು:
ಗ್ರಾಪಂ ವ್ಯಾಪ್ತಿಗೆ ಬರುವ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ 14ನೇ ಹಣಕಾಸು ಅನುದಾನ ದೊಡ್ಡ ಪ್ರಮಾಣದಲ್ಲಿ ದುರುಪಯೋಗವಾಗಿದೆ ಎಂದು ಈ ಹಿಂದಿನಿಂದಲೂ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಯಾವುದೇ ಗಂಭೀರ ಕ್ರಮಗಳಾಗಿರಲಿಲ್ಲ. ಇದೀಗ ಲೋಕಾಯುಕ್ತರು ದಾಳಿ ನಡೆಸಿರುವುದು ಗ್ರಾಪಂಗಳಲ್ಲಾದ ಹಣ ದುರುಪಯೋಗ ಸೇರಿದಂತೆ ಈವರೆಗೆ ನಡೆದಿರುವ ಅಕ್ರಮಗಳ ಹೂರಣ ಹೊರ ಬರುವ ನಿರೀಕ್ಷೆ ಮೂಡಿದೆ.