ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಮುಖ್ಯರಸ್ತೆ ಪಕ್ಕದಲ್ಲಿ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟಿಗೊಸ್ಕರ ತಂದ ವಸ್ತುಗಳು, ಹಣ್ಣು, ತರಕಾರಿ ಬುಟ್ಟಿಗಳನ್ನು ರಸ್ತೆ ಮೇಲಿಟ್ಟು ವ್ಯಾಪಾರ ಮಾಡುತ್ತಿರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಜೊತೆಗೆ ಟ್ರಾಫಿಕ್ ಜಾಮ್‌ದಿಂದ ಸಾರ್ವಜನಿಕರಿಗೆ, ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.ಪಟ್ಟಣದಲ್ಲಿ ಇತ್ತೀಚೆಗೆ ವಾಹನಗಳ ಮತ್ತು ಜನದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬಸ್ ನಿಲ್ದಾಣ, ಅಂಬೇಡ್ಕರ್ ಕ್ರಾಸ್, ಕೋರ್ಟ್, ಬಸ್ ಡಿಪೋ, ವಿವಿಧ ಅಂಗಡಿಗಳ ಮುಂದೆ ಬೈಕ್, ಅಟೋ, ಟಂಟಂ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುತ್ತಿರುವುದರಿಂದ ಮನ್ನಾಎಕ್ಕಳ್ಳಿ, ಹುಮನಾಬಾದ, ಬೀದರ್, ತಾಂಡೂರ ನಗರ ಪ್ರದೇಶಗಳಿಗೆ ದಿನನಿತ್ಯ ಸಂಚರಿಸುವ ಬಸ್‌ಗಳು, ಕಬ್ಬು ತುಂಬಿಕೊಂಡು ಓಡಾಡುವ ಲಾರಿ, ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.
ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ರಸ್ತೆಯಲ್ಲಿ ಕಬ್ಬಿಣದ ಮೆಟ್ಟಲು ಹಾಕಿಕೊಂಡಿದ್ದು, ವೃದ್ಧರು, ಮಹಿಳೆಯರು, ಅಂಗವಿಕಲರು, ರಸ್ತೆಯಲ್ಲಿ ತಿರುಗಾಡುವುದು ತುಂಬಾ ಕಷ್ಟಕರವಾಗಿದೆ. ರಸ್ತೆಯಲ್ಲಿಯೇ ಹಣ್ಣು, ತರಕಾರಿ, ಚಹಾ, ಹೂವು ಅಂಗಡಿ, ಚಪ್ಪಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದರು, ಪೊಲೀಸ್, ಪುರಸಭೆ ಮುಖ್ಯಾಧಿಕಾರಿಗಳು ಯಾವುದೇ ಗಮನಹರಿಸುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿ, ಸಮಸ್ಯೆ ನಿವಾರಣೆಗೆ ಆಕ್ರೋಶ ಹೊರಹಾಕುತ್ತಿದ್ದಾರೆ.ಪಟ್ಟಣದಲ್ಲಿ ಪ್ರತಿ ಬುಧವಾರ ಸಂತೆ ನಡೆಯುತ್ತಿದ್ದು, ವಿವಿಧ ಗ್ರಾಮಗಳಿಂದ ಬಂದ ವ್ಯಾಪಾರಿಗಳು ರಸ್ತೆ ಮೇಲೆ ಕೈಬಂಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಲಾರಿ, ಟ್ರ್ಯಾಕ್ಟರ್ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿದರು, ಗಮನಹರಿಸುತ್ತಿಲ್ಲವೆಂದು ವಕೀಲ್ ಸೂರ್ಯಕಾಂತ ದೂರಿದ್ದಾರೆ.
ಚಿಂಚೋಳಿ ಪಟ್ಟಣದಲ್ಲಿ ವ್ಯಾಪಾರಿಗಳು ರಸ್ತೆ ಅತಿಕ್ರಮಣದಿಂದ ಬೇರೆ ಕಡೆಗೆ ಹೋಗುವ ವಾಹನಗಳ ಸವಾರರು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸಬೇಕಾಗಿದೆ. ಆದರೆ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ: ಬಸವರಾಜ ವಾಡಿ, ಕರವೇ ಅಧ್ಯಕ್ಷಪುರಸಭೆಯಿಂದ ನಿರ್ಮಿಸಿದ ಫುಟ್‌ಪಾತ್ ಮಾಯವಾಗಿದ್ದು, ಫುಟ್‌ಪಾತ್ ನಿರ್ಮಿಸಿದರೆ ಜನರ ಓಡಾಟಕ್ಕೆ ಅನುಕೂಲವಾಗಲಿದೆ. ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಪುರಸಭೆ ಮಾಡಬೇಕಾಗಿದೆ. ಆದರೆ ಮುಖ್ಯಾಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ: ತುಳಸಿರಾಮ ಪೋಳ, ಕನ್ನಡಪರ ಸಂಘಟನೆ ಮುಖಂಡರುಬಸ್ ನಿಲ್ದಾಣ ಹತ್ತಿರ ಜನದಟ್ಟಣೆ ಹೆಚ್ಚಾಗಿದೆ. ವಾಹನಗಳ ಸಂಚಾರಕ್ಕೆ ಭಾರಿ ಅಡ್ಡಿಯಾಗುತ್ತಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿದೆ ಪೊಲೀಸ್, ಪುರಸಭೆ ಗಮನಹರಿಸಬೇಕಾಗಿದೆ: ಹಣಮಂತ ಪೂಜಾರಿ, ಕಾರ್ಯದರ್ಶಿ ಕಲ್ಯಾಣಕರ್ನಾಟಕ ಜನಸೇವಾ ಟ್ರಸ್ಟ್