ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಮೀನುಗಳಿಗೆ 7 ತಾಸು ವಿದ್ಯುತ್ ನೀಡಲು ಜೆಸ್ಕಾಂ ಅಧಿಕಾರಿಗಳ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಲಿಂಗದಳ್ಳಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿದರು. ವೆಂಕಟಗಿರಿ ಹೋಬಳಿಯ ಚಿಕ್ಕಬೆಣಕಲ್, ಹಿರೇಬೆಣಕಲ್, ಹೇಮಗುಡ್ಡ, ಲಿಂಗದಳ್ಳಿ, ಮುಕ್ಕುಂಪಿ, ಎಚ್.ಜಿ. ರಾಮುಲುನಗರ, ಜಬ್ಬಲಗುಡ್ಡ ಗ್ರಾಮಗಳಿಂದ ಬಂದಿದ್ದ 500ಕ್ಕೂ ಹೆಚ್ಚು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2-3 ದಿನಗಳ ಹಿಂದೆ 7 ತಾಸು ವಿದ್ಯುತ್ ನೀಡುತ್ತಿದ್ದೀರಿ. ಈಗ 1 ತಾಸು ವಿದ್ಯುತ್ ಕಡಿತಗೊಳಿಸಿ 6 ತಾಸು ವಿದ್ಯುತ್ ನೀಡುತ್ತಿದ್ದರಿಂದ ಹೊಲ-ಗದ್ದೆಗಳಿಗೆ ಸಮರ್ಪಕವಾಗಿ ನೀರು ತಲುಪುವುದಿಲ್ಲ ಎಂದು ಆರೋಪಿಸಿದರು. ಕೆಲವು ಗ್ರಾಮಗಳಲ್ಲಿ 7 ತಾಸುಗಳು ವಿದ್ಯುತ್ ನೀಡುತ್ತಿದ್ದೀರಿ, ಈಗ ಗಂಗಾವತಿ ಕ್ಷೇತ್ರದಲ್ಲಿ ತಾರತಮ್ಯ ಮಾಡುತ್ತಿದ್ದೀರಿ ಎಂದು ವಾಗ್ವಾದ ನಡೆಸಿದರು.
ಮಾಜಿ ಶಾಸಕ ಮುನವಳ್ಳಿ ಭೇಟಿ: ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಆಗಮಿಸಿ, ಜೆಸ್ಕಾಂ ಅಧಿಕಾರಿಗಳ ಜತೆ ಮಾತನಾಡಿದರು. ಬೆಳೆಗಳು ಒಣಗುತ್ತಿದ್ದು, 7 ತಾಸು ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.ಇನ್ನು ಒಂದು ತಿಂಗಳ ಕಾಲ ವಿದ್ಯುತ್ 7 ತಾಸು ನೀಡಿದರೆ ಸಮರ್ಪಕವಾಗಿ ಬೆಳೆಗಳು ರೈತರ ಕೈಗೆ ಸಿಗುತ್ತವೆ. ಇಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ಅಧಿಕಾರಿಗಳಿಗೆ ವಿವರಿಸಿದರು.
ರೈತ ಮುಖಂಡರಾದ ಹನುಮಂತಪ್ಪ ಮುಕುಂಪಿ, ಆನಂದಗೌಡ, ಸಿದ್ದನಗೌಡ, ಪ್ರಹ್ಲಾದ್ ರಾವ್ ಹೇರೂರ್, ಮದ್ಯಾನೆಪ್ಪಾ ಜಲ್ಲಿ, ದುರಗಪ್ಪ ಜಲ್ಲಿ, ರುದ್ರಪ್ಪ ಹಿರೇಬೆಣಕಲ್, ಭೂಪತಿ ಸುಬೇದಾರ್, ಪಂಪಾಪತಿ ಬಳ್ಳಾರಿ, ಶರಣಪ್ಪ ಕಟಗಿ, ಮಹೇಂದ್ರ ಕುಮಾರ್, ಮಲ್ಲೇಶಪ್ಪ ದಾಸರ, ನಾಗರಾಜ್ ನಾಯಕ್, ಮಲ್ಲಿಕಾರ್ಜುನ ಗೌಡ, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್, ಡಿವೈಎಸ್ಪಿ ಜಾಯಪ್ಪ ನ್ಯಾಮನಗೌಡ ಉಪಸ್ಥಿತರಿದ್ದರು.