ಐತಿಹಾಸಿಕ ಹೆಗ್ಗೇರಿ ಕೆರೆ ಒತ್ತುವರಿ ಆರೋಪ

KannadaprabhaNewsNetwork |  
Published : Oct 27, 2025, 12:30 AM IST
26ಎಚ್‌ವಿಆರ್ 1, 1ಎ ಹಾವೇರಿ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಹೆಗ್ಗೇರಿ ಕೆರೆ  | Kannada Prabha

ಸಾರಾಂಶ

ಸೌಕರ್ಯಗಳಿಂದ ವಂಚಿತಗೊಂಡಿದ್ದು, ವರ್ಷದಿಂದ ವರ್ಷಗಳಿಂದ ಕೆರೆ ಒತ್ತುವರಿಗೆ ತುತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹಾವೇರಿ: ರಾಜ್ಯದ ಅತೀ ದೊಡ್ಡ ಕೆರೆಗಳ ಪೈಕಿ ಎರಡನೇ ಸ್ಥಾನದಲ್ಲಿರುವ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಹೆಗ್ಗೇರಿ ಕೆರೆ ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಹಲವು ಸೌಕರ್ಯಗಳಿಂದ ವಂಚಿತಗೊಂಡಿದ್ದು, ವರ್ಷದಿಂದ ವರ್ಷಗಳಿಂದ ಕೆರೆ ಒತ್ತುವರಿಗೆ ತುತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ನಗರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಹೆಗ್ಗೇರಿ ಕೆರೆಯು ಹಾವೇರಿ ಹೋಬಳಿ ವ್ಯಾಪ್ತಿಗೆ ಬರುತ್ತಿದ್ದು, ಒಂದು ಕಾಲದಲ್ಲಿ ಸುಮಾರು 1250 ಎಕರೆ ವಿಸ್ತೀರ್ಣದಿಂದ ಖ್ಯಾತಿಯಾಗಿತ್ತು. ಆದರೆ ಪ್ರಸ್ತುತ ಹಲವು ವರ್ಷಗಳಿಂದ ಕೆರೆ ಒತ್ತುವರಿಯಾಗುತ್ತಿದೆ. ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗುತ್ತಿದ್ದ ಈ ಕೆರೆ ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಸುಧಾರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿತ್ತು. ಅಲ್ಲದೆ, ಈ ಕೆರೆಯ ನೀರನ್ನೇ ಅವಲಂಬಿಸಿದ್ದ ಸಾವಿರಾರು ರೈತರು ನೀರಾವರಿ ಮಾಡುತ್ತಿದ್ದರು.1250 ಎಕರೆ ವಿಸ್ತೀರ್ಣ ಹೊಂದಿದ್ದ ಕೆರೆ ನಂತರ ಸಾವಿರ ಎಕರೆಗೆ ಕುಸಿಯಿತು. ಅದಾದ ನಂತರ 900 ಎಕರೆ ಇದೀಗ 681 ಎಕರೆ ವಿಸ್ತೀರ್ಣ ಹೊಂದಿದೆ. ಭೂ ಕೋಡಿಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ 219 ಎಕರೆ 29 ಗುಂಟೆ, ಕೆರಿಮತ್ತಿಹಳ್ಳಿ ಗ್ರಾಮಕ್ಕೆ ಹೊಂದಿಕೊಂಡು 206 ಎಕರೆ 29 ಗುಂಟೆ ಹಾಗೂ ಹಾವೇರಿಗೆ ಹೊಂದಿಕೊಂಡು 256 ಎಕರೆ 12 ಗುಂಟೆ ಸೇರಿ ಒಟ್ಟು 681 ಎಕರೆ 7 ಗುಂಟೆ ಹೆಗ್ಗೇರಿ ಕೆರೆ ವಿಸ್ತೀರ್ಣ ಹೊಂದಿದೆ. ಕೆರೆಯ ದಡ ಹೊಂದಿಕೊಂಡೇ ಇರುವ ಗ್ರಾಮಗಳ ಸುತ್ತ ಕೆರೆ ಒತ್ತುವರಿಯಾಗಿದೆ. ಕೆರೆ ಒತ್ತುವರಿ ತೆರವುಗೊಳಿಸಬೇಕು, ಕೆರೆಯ ವಿಸ್ತೀರ್ಣದ ಸರ್ವೆ ಮಾಡಬೇಕು ಮತ್ತು ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಕೆರೆ ಹೂಳು ತೆಗೆಯಲು ಒತ್ತಾಯ: ಹೆಗ್ಗೇರಿ ಕೆರೆಯಲ್ಲಿನ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗಿಲ್ಲ. ಹೂಳು ತೆಗೆಯುವ ಕಾರ್ಯ ವೈಜ್ಞಾನಿಕವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 48 ನಿರ್ಮಿಸುವಾಗ ಕೆರೆಯ ಮಣ್ಣನ್ನು ಅಲ್ಲಲ್ಲಿ ಅಗೆದಿದ್ದಾರೆ. ಕೆರೆಯ ಕೆಲವು ಕಡೆ ಮುಳ್ಳುಪೂದೆಗಳು ಬೆಳೆದಿದ್ದು, ಕೆರೆಯ ವಿಸ್ತಾರಕ್ಕೆ ಧಕ್ಕೆ ತಂದಿದೆ. ಅಲ್ಲದೆ, ನಗರಸಭೆ ಕೆಲ ವರ್ಷದ ಹಿಂದೆ ಕೆರೆಯಲ್ಲಿ ಗ್ಲಾಸ್ ಹೌಸ್ ನಿರ್ಮಿಸಲು ಮುಂದಾಗಿತ್ತು. ಎರಡು ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಗ್ಲಾಸ್ ಹೌಸ್ ಅವೈಜ್ಞಾನಿಕ ಕಾರಣದಿಂದ ಅರ್ಧಕ್ಕೆ ನಿಂತಿದೆ. ಇಲ್ಲಿ ನಿರ್ಮಾಣವಾಗಬೇಕಿದ್ದ ಗ್ಲಾಸ್‌ಹೌಸ್ ನೆಲೋಗಲ್ ಗುಡ್ಡದ ಮೇಲೆ ನಿರ್ಮಾಣವಾಗುತ್ತಿದೆ. ಗ್ಲಾಸ್‌ಹೌಸ್‌ಗಾಗಿ ಕೆರೆಯಲ್ಲಿ ನಿರ್ಮಿಸಿದ ಗೋಡೆ ಸಹ ಕೆರೆಯ ಅಗಾಧತೆಗೆ ಧಕ್ಕೆ ತಂದಿದೆ ಎಂದು ರೈತರು ಆರೋಪಿಸಿದ್ದಾರೆ.ಅಕ್ರಮ ಚಟುವಟಿಕೆಗಳ ತಾಣ: ಹಾವೇರಿಗೆ ಕುಡಿಯುವ ನೀರು ಒದಗಿಸಲು ಆಸರೆಯಾದ ಹೆಗ್ಗೇರಿ ಕೆರೆಯನ್ನು 2008ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಗರಸಭೆ ಅಧೀನಕ್ಕೆ ನೀಡಲಾಗಿದೆ. ಕೆರೆ ಹಾಗೂ ಕೆರೆ ಪ್ರದೇಶದ ನಿರ್ವಹಣೆ ಕೊರತೆಯಿಂದ ಕೆರೆ ಪ್ರದೇಶವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಿತ್ಯವೂ ಸಂಜೆ ಹಾಗೂ ರಾತ್ರಿ ಕಿಡಿಗೇಡಿಗಳು ಕೆರೆ ಪ್ರದೇಶಕ್ಕೆ ಬಂದು ಮದ್ಯದ ಪಾರ್ಟಿ ಮಾಡುತ್ತಿದ್ದಾರೆ. ಕೆಲವರಂತೂ ಹಗಲಿನಲ್ಲಿಯೇ ಪಾದಚಾರಿ ಮಾರ್ಗದಲ್ಲಿ ಕುಳಿತು, ಮದ್ಯ ಕುಡಿಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ರಜಾ ದಿನಗಳಲ್ಲಿಯೂ ಕೆರೆ ದಡ ಹಾಗೂ ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡುವವರು ಹೆಚ್ಚಾಗುತ್ತಿದ್ದಾರೆ. ಇದರಿಂದಾಗಿ, ಮಹಿಳೆಯರು ಹಾಗೂ ಮಕ್ಕಳ ಸಮೇತ ಕೆರೆ ಬಳಿ ಹೋಗಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮೃತಪಟ್ಟ ಪ್ರಾಣಿಗಳನ್ನು ಕೆರೆಯ ದಂಡೆ ಹತ್ತಿರ ಎಸೆದು ಹೋಗುತ್ತಿದ್ದು, ಇದರಿಂದ ಕೆರೆ ನೈರ್ಮಲ್ಯಕ್ಕೆ ಧಕ್ಕೆಯಾಗುತ್ತಿದೆ. ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಅವರು ಹೆಗ್ಗೇರಿ ಕೆರೆಗೆ ಬಾಗಿನ ಅರ್ಪಿಸಲು ಬಂದಿದ್ದಾಗಲೇ ಸರ್ವೇ ಮಾಡುವಂತೆ ಒತ್ತಾಯಿಸಿದ್ದೆವು. ಅಲ್ಲಿಂದ ಇಂದಿನವರೆಗೂ ಜಿಲ್ಲಾಡಳಿತ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಹೀಗಾಗಿ, ನಾವು ಸ್ಥಳೀಯರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಪತ್ರವನ್ನು ಕಳುಹಿಸಿದ್ದೇವೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೆಗ್ಗೇರಿ ಕೆರೆಯ ಸರ್ವೇ ಮಾಡಿ ಹದ್ದುಬಸ್ತ್ ಮಾಡಬೇಕು. ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ತಡೆಗೋಡೆ ನಿರ್ಮಾಣವಾಗುವವರೆಗೆ ಜಿಲ್ಲಾಡಳಿತ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ರೈತ ಮುಖಂಡ ಫಕ್ಕೀರಗೌಡ ಗಾಜಿಗೌಡ್ರ ಹೇಳಿದರು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೆಗ್ಗೇರಿ ಕೆರೆ ಸುತ್ತಮುತ್ತ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಕೆರೆ ನಿರ್ವಹಣೆ ಕೊರತೆಯಿಂದಾಗಿ ಕೆರೆ ಸೌಂದರ್ಯ ಹಾಳಾಗಿದೆ. ಜಿಲ್ಲಾ ಕೇಂದ್ರಕ್ಕೆ ಇವರೆಗೂ ಸುಸಜ್ಜಿತ ಉದ್ಯಾನ ಹಾಗೂ ಪ್ರವಾಸಿ ತಾಣವಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೆಗ್ಗೇರಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದರೆ, ಹೆಚ್ಚು ಜನರು ಬಂದು ಹೋಗುತ್ತಾರೆ. ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಡಾ.ಮಹಾದೇವ ಬಣಕಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಹುಬ್ಬಳ್ಳಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ