ಕನ್ನಡಪ್ರಭ ವಾರ್ತೆ ಹಾಸನ
ಗ್ರಾಮದ ಪುನೀತ್, ಚಂದನ್ ಹಾಗೂ ಇತರ ರೈತರು ಮಾತನಾಡಿ, ಕಳೆದ ಎರಡು ದಶಕಗಳಿಂದ ಸಂಘದಲ್ಲಿ ಒಂದೇ ಕಾರ್ಯದರ್ಶಿ ಅಧಿಕಾರ ನಡೆಸುತ್ತಿದ್ದು, ಈ ಅವಧಿಯಲ್ಲಿ ರೈತರ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಗಮನಾರ್ಹ ಯೋಜನೆಗಳು ಜಾರಿಯಾಗಿಲ್ಲ ಎಂದು ಆರೋಪಿಸಿದರು. ಹಾಲು ಪೂರೈಕೆ ಮಾಡುವ ರೈತರಿಗೆ ನೀಡಬೇಕಾದ ಬೋನಸ್, ವಿವಿಧ ಪ್ರೋತ್ಸಾಹಧನಗಳು, ಯಶಸ್ವಿನಿ ಕಾರ್ಡ್ ಸೇರಿದಂತೆ ಅನೇಕ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರೈತರು ಪ್ರತಿದಿನ ಹಾಲು ಪೂರೈಕೆ ಮಾಡುತ್ತಿದ್ದರೂ, ಎಷ್ಟು ಹಾಲು ಹಾಕಲಾಗಿದೆ, ಅದಕ್ಕೆ ಎಷ್ಟು ಹಣ ಪಾವತಿಯಾಗಬೇಕು ಎಂಬ ಸ್ಪಷ್ಟ ಲೆಕ್ಕಪತ್ರಗಳನ್ನು ನೀಡಲಾಗುತ್ತಿಲ್ಲ ಎಂದು ದೂರಿದರು. ಹಾಲಿನ ಪ್ರಮಾಣ ಹಾಗೂ ಹಣದ ವಿವರಗಳನ್ನು ಪಾರದರ್ಶಕವಾಗಿ ಪ್ರದರ್ಶಿಸುವ ವ್ಯವಸ್ಥೆಯೂ ಇಲ್ಲದ ಕಾರಣ ರೈತರು ತಮ್ಮ ಆದಾಯದ ಕುರಿತು ಗೊಂದಲದಲ್ಲಿದ್ದಾರೆ ಎಂದು ಹೇಳಿದರು. ಸಂಘದಲ್ಲಿ ನಕಲಿ ಖಾತೆಗಳನ್ನು ತೆರೆಯುವ ಮೂಲಕ ರೈತರಿಗೆ ಬರಬೇಕಾದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಕೆಲವು ಹಣಕಾಸು ವ್ಯವಹಾರಗಳು ಕಾರ್ಯದರ್ಶಿಗೆ ಸಂಬಂಧಿಸಿದ ಕುಟುಂಬ ಸದಸ್ಯರ ಖಾತೆಗಳಿಗೆ ವರ್ಗಾವಣೆಯಾಗಿರುವ ಶಂಕೆ ಇದೆ ಎಂದು ರೈತರು ಹೇಳಿದರು. ಸರ್ಕಾರದಿಂದ ಬರುವ ವಿವಿಧ ಸಹಾಯಧನಗಳು ಮತ್ತು ಅನುದಾನಗಳೂ ಅರ್ಹ ಫಲಾನುಭವಿಗಳಿಗೆ ತಲುಪದೇ, ಬೇರೆ ಖಾತೆಗಳಿಗೆ ಜಮೆಯಾಗುತ್ತಿರುವ ಬಗ್ಗೆ ಅನುಮಾನಗಳಿವೆ ಎಂದು ಅವರು ದೂರಿದರು. ಇದೇ ವೇಳೆ, ಬೋನಸ್ ಹಂಚಿಕೆಯಲ್ಲಿ ಕೂಡ ಅಕ್ರಮ ನಡೆದಿದೆ ಎಂದು ರೈತರು ದೂರಿದರು. ಹಾಲು ಪೂರೈಕೆ ಮಾಡಿದ ರೈತರಿಗೆ ಅಲ್ಪ ಪ್ರಮಾಣದ ಬೋನಸ್ ನೀಡಲಾಗಿದ್ದು, ಉಳಿದ ಹಣದ ಲೆಕ್ಕ ಸ್ಪಷ್ಟವಾಗಿಲ್ಲ. ಷೇರುದಾರರಲ್ಲದ ಕಾರ್ಯದರ್ಶಿ ಕುಟುಂಬದ ಕೆಲವರ ಖಾತೆಗಳಿಗೆ ಹಣ ಜಮೆಯಾಗಿರುವ ಮಾಹಿತಿ ದೊರೆತಿದೆ ಎಂದು ಆರೋಪಿಸಿದರು.
ಸಂಘದ ಆಡಳಿತಾತ್ಮಕ ಕಾರ್ಯವೈಖರಿಯ ಮೇಲೂ ರೈತರು ಪ್ರಶ್ನೆ ಎತ್ತಿದ್ದಾರೆ. ಹಲವು ವರ್ಷಗಳಿಂದ ಸಂಘದ ಚುನಾವಣೆಗಳನ್ನು ನಿಯಮಿತವಾಗಿ ನಡೆಸದೇ, ಕೆಲವೇ ವ್ಯಕ್ತಿಗಳ ನಿಯಂತ್ರಣದಲ್ಲಿ ಆಡಳಿತ ನಡೆಯುತ್ತಿದೆ ಎಂದು ದೂರಿದರು. ಸಂಘದ ಅಧ್ಯಕ್ಷರು ಮತ್ತು ಮೇಲ್ವಿಚಾರಕರ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ ರೈತರು, ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳಿದರು.ಈ ಕುರಿತು ಸ್ಪಷ್ಟನೆ ಪಡೆಯಲು ಕಾರ್ಯದರ್ಶಿ ಹಾಗೂ ಮೇಲ್ವಿಚಾರಕರನ್ನು ಹಲವು ಬಾರಿ ಸಂಪರ್ಕಿಸಲು ಯತ್ನಿಸಿದರೂ ಅವರು ಸಭೆಗೆ ಹಾಜರಾಗಿಲ್ಲ ಹಾಗೂ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ರೈತರು ಆರೋಪಿಸಿದರು. ಕಳೆದ ಒಂದು ವಾರದಿಂದ ಸಭೆ ಕರೆಯುವಂತೆ ಒತ್ತಾಯಿಸಿದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಹೇಳಿದರು. ಸಂಘದಲ್ಲಿ ಕಳೆದ ಹಲವು ವರ್ಷಗಳಿಂದ ಮೂರು ರಿಂದ ನಾಲ್ಕು ಕೋಟಿ ರುಪಾಯಿವರೆಗೆ ಹಣಕಾಸು ಅಕ್ರಮ ನಡೆದಿರುವ ಶಂಕೆ ವ್ಯಕ್ತಪಡಿಸಿದ ರೈತರು, ಸಹಕಾರ ಇಲಾಖೆ, ಹಾಲು ಒಕ್ಕೂಟ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಲೆಕ್ಕಪತ್ರಗಳ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ಒತ್ತಾಯಿಸಿದರು. ನಾವು ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಹಸುಗಳನ್ನು ಸಾಕಿ ಹಾಲು ಉತ್ಪಾದನೆ ಮಾಡುತ್ತೇವೆ. ಆದರೆ ನಮ್ಮ ಶ್ರಮದ ಹಣವೇ ಸರಿಯಾಗಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದರೆ ರೈತರು ಬದುಕುವುದು ಹೇಗೆ? ಎಂದು ಪ್ರಶ್ನಿಸಿದ ಅವರು, ಶೀಘ್ರದಲ್ಲಿ ನ್ಯಾಯ ಸಿಗದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.